‘ನನ್ನ ಶಾಪದಿಂದಲೇ ಕರ್ಕರೆ ಸಾವು’ : ಸಾದ್ವಿ ಹೇಳಿಕೆಗೆ ಐಪಿಎಸ್ ಅಸೋಸಿಯೇಷನ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.20-ಮುಂಬೈನ ಭಯೋತ್ಪಾದಕ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ನನ್ನ ಶಾಪದಿಂದಲೇ ಸಾವನ್ನಪ್ಪಿದ್ದರು ಎಂದು ಸಾದ್ವಿ ಪ್ರಜ್ಞಾಸಿಂಗ್ ಹೇಳಿಕೆಗೆ ಐಪಿಎಸ್ ಅಸೋಸಿಯೇಷನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಟ್ವೀಟರ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಾದ್ವಿ ಪ್ರಜ್ಞಾ ಅವರ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಅದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತೀಯ ಐಪಿಎಸ್ ಅಸೋಸಿಯೇಷನ್ ಅಶೋಕ ಚಕ್ರ ಪ್ರಶಸ್ತಿ ಪುರಸ್ಕøತ ದಿವಂಗತ ಹೇಮಂತ್ ಕರ್ಕರೆ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅತ್ಯುನ್ನತವಾದ ತ್ಯಾಗ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಅವರ ತ್ಯಾಗ ಬಲಿದಾನವನ್ನು ಅವಮಾನಿಸುವಂತೆ ಹೇಳಿಕೆ ನೀಡುತ್ತಿರುವುದನ್ನು ನಾವು ಸಾಮೂಹಿಕವಾಗಿ ಖಂಡಿಸುತ್ತೇವೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಬಲಿದಾನವನ್ನು ಎಲ್ಲರೂ ಗೌರವಿಸಬೇಕು ಎಂದು ಐಪಿಎಸ್ ಅಸೋಸಿಯೇಷನ್ ಮನವಿ ಮಾಡಿದೆ.

ಅದರ ಬೆನ್ನ ಹಿಂದೆ ಟ್ವೀಟಿಗರು ನಾನಾ ರೀತಿಯ ವ್ಯಾಖ್ಯಾನಗಳನ್ನು ಮಾಡಿದ್ದಾರೆ. 2009ರಲ್ಲಿ ಹೇಮಂತ್ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ಕೇಂದ್ರ ಸರ್ಕಾರ ನೀಡಿದೆ. ಈಗ ಪ್ರಜ್ಞಾ ಅವರ ಹೇಳಿಕೆಗಳು ಖಂಡನೀಯ ಎಂದು ಕೆಲವರು ಅಭಿಪ್ರಾಯಪಟ್ಟರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೇಮಂತ್ ಕರ್ಕರೆ ಅವರ ತ್ಯಾಗವನ್ನು ಮೆಚ್ಚಿ ಅವರ ಕುಟುಂಬಕ್ಕೆ ಒಂದು ಕೋಟಿ ರೂ.

ನೆರವು ನೀಡಲು ಮುಂದಾಗಿದ್ದರು. ಆದರೆ ಈಗ ಅವರದೇ ಪಕ್ಷದ ಅಭ್ಯರ್ಥಿ ಹೇಮಂತ್ ಕರ್ಕರೆ ಸಾವನ್ನು ಶಾಪದಿಂದಾಗಿ ಆಗಿದೆ ಎಂದು ಹೇಳುತ್ತಿದ್ದಾರೆ. ಇದು ಯಾವ ರೀತಿ ಗೊಂದಲ ಎಂದು ಪ್ರಶ್ನಿಸಲಾಗಿದೆ. ಇನ್ನೂ ಕೆಲವರು ಹೇಮಂತ್ ಕರ್ಕರೆಗಿಂತಲೂ ತುಕರಾಂ ಓಮ್ಲೆ ಅಶೋಕ ಚಕ್ರ ಪ್ರಶಸ್ತಿಗೆ ಅರ್ಹರಾದ ಪೊಲೀಸ್ ಅಧಿಕಾರಿಯಾಗಿದ್ದರು ಎಂದು ಪ್ರತಿಕ್ರಿಯಿಸಿದ್ದಾರೆ.

Facebook Comments

Sri Raghav

Admin