ಹೇಮಾವತಿ ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ,ಆ.11-ಗೊರೂರು ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು ಒಂದು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುವ ಕಾರಣ ತಾಲೂಕಿನಲ್ಲಿ ಸುಮಾರು 45ಕಿ.ಮೀ ದೂರದಷ್ಟು ಹರಿಯುವ ಹೇಮಾವತಿ ನದಿ ಪಾತ್ರದ ಪ್ರದೇಶದಲ್ಲಿ ಹಲವಾರು ಅವಘಡಗಳು ಸಂಭವಿಸಿದ್ದು ಕೊಟ್ಯಾಂತರ ರೂ ನಷ್ಟ ಉಂಟಾಗಿರುವ ವರದಿಯಾಗಿದೆ.

ಹೇಮಗಿರಿ ದೇವಾಲಯದ ನದಿ ತೀರದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಮೀನುಗಾರರ ಕುಟುಂಬಗಳನ್ನು ಮುಂಜಗ್ರತ ಕ್ರಮವಾಗಿ ಪಾಂಡವಪುರ ಉಪವಿಭಾಗಾಧಿಕಾರಿ ಎಂ.ಶೈಲಜ ಅವರು ಮತ್ತು ತಹಸೀಲ್ದಾರ್ ಎಂ.ಶಿವಮೂರ್ತಿ ರವರ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ತಾಲೂಕಿನ ಬಂಡಿಹೊಳೆ ಸಮೀಪ ನಿರ್ಮಾಣ ಮಾಡಿದ್ದ ತ್ರಿಶೂಲ್ ಜಲ ವಿದ್ಯುತ್ ಕೇಂದ್ರ ನದಿ ನೀರಿನಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದೆ. ಮಣ್ಣು ಮಿಶ್ರಿತ ನದಿಯ ನೀರು ಜಲ ವಿದ್ಯುತ್ ಕೇಂದ್ರಕ್ಕೆ ನುಗ್ಗಿರುವುದರಿಂದ ಟರ್ಬೈನ್‍ಗಳು ಮುಳುಗಿವೆ. ಇದರಿಂದ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಟರ್ಬೈನ್ ಜೊತೆಗೆ ಹಲವು ಯಂತ್ರಗಳಿಗೂ ನೀರು ನುಗ್ಗಿದೆ.

ಜಲ ವಿದ್ಯುತ್ ಕೇಂದ್ರ ಮುಳುಗಡೆಯಿಂದ ಸಮೀಪವೇ ಇದ್ದ ಜಮೀನುಗಳಿಗೂ ನೀರು ನುಗ್ಗಿದ್ದು, ಅಪಾರ ನಷ್ಟ ಸಂಭವಿಸಿದೆ. ಚಿಕ್ಕಮಂದಗೆರೆ ಗ್ರಾಮದ ಬಳಿ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ನದಿಯ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ. ಕಿರು ಸೇತುವೆಗಳು ಮುಚ್ಚಿ ಹೋಗಿವೆ. ಮನೆಗಳು ಜಲಾವೃತವಾಗಿವೆ.

ಗ್ರಾಮಸ್ಥರು ಸಹಾಯ ಹಸ್ತ ಚಾಚುತ್ತಿದ್ದಾರೆ. ಮಂದಗೆರೆ ಸಮೀಪದ ಕುರಾವು ದ್ವೀಪದ ಸುತ್ತಲೂ ಹೇಮಾವತಿ ನದಿಯಿಂದ ಜಲಾವೃತಗೊಂಡಿದ್ದು ಅಲ್ಲಿದ್ದ ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

ಬಂಡಿಹೊಳೆ, ನಾಟನಹಳ್ಳಿ, ಬೆಳತೂರು, ಮಡುವಿನಕೋಡಿ, ಆಲಂಬಾಡಿ, ಕಟ್ಟೆಕ್ಯಾತನಹಳ್ಳಿ, ಕಟ್ಟಹಳ್ಳಿ, ಭೂವರಹನಾಥಕಲ್ಲಹಳ್ಳಿ, ದಡದಹಳ್ಳಿ, ಅಕ್ಕಿಹೆಬ್ಬಾಳು ಮತ್ತಿತರರ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನದಿಯ ನೀರು ನುಗ್ಗಿದೆ. ಇದರಿಂದ ತೆಂಗು, ಬಾಳೆ, ಅಡಿಕೆ, ಕಬ್ಬು ಮತ್ತಿತರರ ಬೆಳೆಗಳು ನೀರಿನಿಂದ ಜಲಾವೃತಗೊಂಡಿವೆ. ಇದರಿಂದ ರೈತರಿಗೆ ಕೊಟ್ಯಾಂತರ ರೂ ನಷ್ಟ ಉಂಟಾಗಿದೆ.

ಅಪಾಯದಂಚಿನಲ್ಲಿ ಅಕ್ಕಿಹೆಬ್ಬಾಳು ಸೇತುವೆ: ಸುಮಾರು 100ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಅಕ್ಕಿಹೆಬ್ಬಾಳು ಸೇತುವೆ ಶೇ.75ರಷ್ಟು ಹೇಮಾವತಿ ನದಿ ನೀರಿನಿಂದ ಮುಳುಗಿದ್ದು ಇದೇ ರೀತಿ ನೀರು ಯಥೇಚ್ಚವಾಗಿ ಹರಿದರೆ ಸೇತುವೆಗೆ ಅಪಾಯವಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ಸೇತುವೆ ಮೇಲೆ ಎರಡೂ ಬದಿಯಲ್ಲಿ ಗಿಡಗಂಟೆಗಳು ಬೆಳೆದು ಬೇರುಬಿಟ್ಟುಕೊಂಡಿದ್ದು ಸೇತುವೆಯು ಸಣ್ಣ ಸಣ್ಣ ಬಿರುಕು ಕಾಣಿಸಿಕೊಂಡಿದೆ.

ಅಪಾಯಕ್ಕೆ ಸೂಚನೆ ನೀಡುತ್ತಿವೆ. ಡಿಸಿ,ಎಸಿ ಬೇಟಿ: ತಾಲೂಕಿನ ಬಂಡಿ ಹೊಳೆ ಸಮೀಪದ ಹೇಮಗಿರಿ ಫಾಲ್ಸ್ ನಲ್ಲಿ ಹೇಮಾವತಿ ನದಿಯು ಉಕ್ಕಿ ಹರಿಯುತ್ತಿರುವ ಸ್ಥಳ ಸೇರಿದಂತೆ ತಾಲೂಕಿನ ನದಿಪಾತ್ರದ ವಿವಿಧ ಗ್ರಾಮಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮತ್ತು ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜ, ತಹಸೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದ ಅಧಿಕಾರಿಗಳ ತಂಡವು ಅವರು ಬೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕನ ಮಾಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಗೊರೂರು ಅಣೆಕಟ್ಟೆಯಿಂದ ಸುಮಾರು 1ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನದಿಗೆ ಇಳಿಯಬಾರದು. ಮೀನುಗಾರರು ಮೀನು ಹಿಡಿಯಲು ನದಿಗೆ ಹೋಗಬಾರದು. ಜನುವಾರುಗಳನ್ನು ನದಿ ಕಡೆ ಬಿಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

# ಎಚ್ಚರಿಕೆ ಫಲಕ: ಹೇಮಾವತಿ ನದಿಯಲ್ಲಿ ನೀರು ಹೆಚ್ಚಿರುವ ಹಿನ್ನೆಲೆಯಲ್ಲಿ ಅಪಾಯವಿರುವ ಸ್ಥಳಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹಾಗೂ ಅಕ್ಕಿಹೆಬ್ಬಾಳು, ಮಂದಗೆರೆ, ಬಂಡಿಹೊಳೆ ಗ್ರಾಮ ಪಂಚಾಯಿತಿಗಳು ಎಚ್ಚರಿಕೆಯ ಫಲಕಗಳನ್ನು ಅಳವಡಿಸಿ ರಕ್ಷಣೆಗೆ ಪೊಲೀಸರನ್ನು ನಿಯೋಜನೆ ಮಾಡಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ.

# ಸಾರ್ವಜನಿಕರ ದಂಡು: ಮೈದುಂಬಿ ಹರಿಯುತ್ತಿರುವ ಅಕ್ಕಿಹೆಬ್ಬಾಳು ಸೇತುವೆಯ ಬಳಿ, ಹೇಮಗಿರಿ ಅಣೆಕಟ್ಟೆ, ಮಂದಗೆರೆ ಅಣೆಕಟ್ಟೆ ಬಳಿ ಸಾವಿರಾರು ಮಂದಿ ಜಮಾಯಿಸಿ ಹೇಮಾವತಿ ನದಿಯನ್ನು ವೀಕ್ಷಣೆ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

# ನೋಡಲ್ ಅಧಿಕಾರಿಗಳ ನೇಮಕ: ಹೇಮಾವತಿ ಪ್ರವಾಹ ನಿಯಂತ್ರಣ ಕರ್ತವ್ಯ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಪಂ ಇಒ ಹೇಮಾವತಿ ನೀರಾವರಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗಿದ್ದು ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಜೊತೆಗೆ ಹಾನಿಯ ಬಗ್ಗೆ ನಿತ್ಯ ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಅವರು ತಿಳಿಸಿದ್ದಾರೆ.

Facebook Comments