ಹೇಮಾವತಿ ನದಿ ದಂಡೆಯ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ ; ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಆಗಸ್ಟ್ 8 ರಂದು ಬೆಳಿಗ್ಗೆ 6 ಗಂಟೆಗೆ 48133 ಕ್ಯುಸೆಕ್ಸ್ ನೀರು ಹರಿದು ಬರುತ್ತಿದ್ದು, ಜಲಾಶಯದ ಗರಿಷ್ಠ ನೀರಿನ ಮಟ್ಟವು 2922 ಅಡಿಗಳಾಗಿದ್ದು, ಆ.8 ರಂದು ಬೆಳಿಗ್ಗೆ 6 ಗಂಟೆಗೆ 2905.30 ಅಡಿಗಳಾಗಿದ್ದು, ಇನ್ನೂ 16.70 ಅಡಿಗಳಷ್ಟು ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿರುತ್ತದೆ.

ಆದರೆ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆಯಿರುವುದರಿಂದ, ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು/ ಸ್ಥಳೀಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ಗೊರೂರು ಹೇಮಾವತಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ವಿನಂತಿಸಿದ್ದಾರೆ.

ನದಿಪಾತ್ರದ ವ್ಯಾಪ್ತಿಯಲ್ಲಿನ ಎಲ್ಲಾ ನೀರಾವರಿ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರರು ಹಾಗೂ ಕಂದಾಯ ಇಲಾಖೆಯ ಇತರೆ ಎಲ್ಲಾ ಅಧಿಕಾರಿಗಳು ಈ ಬಗ್ಗೆ ತುರ್ತು ಕ್ರಮ ಕೈಗೊಂಡು, ಹೇಮಾವತಿ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿಸುವ ಎಲ್ಲಾ ಗ್ರಾಮಸ್ಥರು/ ಸ್ಥಳೀಯ ವಾಸಿಗಳಿಗೆ ಸೂಕ್ತ ತಿಳುವಳಿಕೆ ನೀಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಲಾಗಿದೆ.

Facebook Comments

Sri Raghav

Admin