ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಆ.5- ಹೇಮಾವತಿ ಜಲಾನಯನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಚುರುಕುಗೊಂಡಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ.

ಹೇಮಾವತಿ ಜಲಾಶಯದ ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು ಜಿಲ್ಲಾಯ ಮೂಡಿಗೆರೆ ಹಾಗೂ ಹಾಸನ ಜಿಲ್ಲಾಯ ಸಕಲೇಶಪುರ ತಾಲೂಕಿನಲ್ಲಿ ಮುಂಗಾರು ಮಳೆ ಬಿರುಸಾಗಿದೆ. ಹಾಗಾಗಿ ಜಲಾಶಯಕ್ಕೆ ಶನಿವಾರ 8564 ಕ್ಯೂಸೆಕ್ಸ್ ಇದ್ದ ಒಳ ಹರಿವಿನ ಪ್ರಮಾಣ ಭಾನುವಾರ 12015 ಕ್ಯೂಸೆಕ್ಸ್‍ಗೆ ಏರಿಕೆಯಾಗಿದೆ.

37.10 ಟಿಎಂಸಿ ಸಂಗ್ರಹಣಾ ಸಾಮಥ್ರ್ಯದ ಜಲಾಶಯ ಕಳೆದ ವರ್ಷ ಜು.15ಕ್ಕೆ ಭರ್ತಿಯಾಗಿ ಹೆಚ್ಚುವರಿ ನೀರನ್ನು ಕ್ರಷ್ ಗೇಟ್‍ಗಳ ಮೂಲಕ ಭೋರ್ಗರೆಯುತ್ತಾ ನದಿಗೆ ಹರಿಯುತ್ತಿತ್ತು. ಆದರೆ ಈ ವರ್ಷ ಜಲಾಶಯದಲ್ಲಿ 16.45 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 12.08 ಟಿಎಂಸಿ ಮಾತ್ರ.

ಜಲಾಶಯದಲ್ಲಿ 25 ಟಿಎಂಸಿ ನೀರು ಸಂಗ್ರಹವಾದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ನಾಲೆಗಳಲ್ಲಿ ನೀರು ಹರಿಸಲಾಗುವುದು ಎಂದು ಹೇಮಾವತಿ ಅಣೆಕಟ್ಟು ವಿಭಾಗದ ಎಂಜಿನಿಯರುಗಳು ಸ್ಪಷ್ಟಪಡಿಸಿದ್ದಾರೆ.

28 ಅಡಿ ಬಾಕಿ: ಜಲಾಶಯ ಭರ್ತಿಗೆ ಇನ್ನು 28 ಅಡಿಗಳಷ್ಟು ನೀರು ತುಂಬಬೇಕಿದೆ. ಒಳ ಹರಿವೇನೂ ಹೆಚ್ಚಳವಾಗಿದೆ ಆದರೆ ಮಳೆಯ ಪ್ರಮಾಣ ಇದೇ ರೀತಿ ಹೆಚ್ಚಾದರೆ ಜಲಾಶಯ ಭರ್ತಿಯಾಗಲಿದ್ದು, ಇನ್ನು ಎರಡು ವಾರ ಒಳ ಹರಿವು ಪ್ರತಿದಿನ 10 ಸಾವಿರ ಕ್ಯೂಸೆಕ್ ಆದರೆ ಜಲಾಶಯ ತುಂಬಲಿದೆ ಎಂದು ಅಂದಾಜಿಸಲಾಗಿದೆ.

25 ಟಿಎಂಸಿ ನೀರು ಸಂಗ್ರಹ ಸಾಧ್ಯತೆ: ಒಳಹರಿವಿನ ಪ್ರಮಾಣ ಪ್ರತಿದಿನವೂ 10 ಸಾವಿರ ಕ್ಯೂಸೆಕ್‍ನಂತೆ ಮುಂದುವರಿದರೆ ಇನ್ನು 15 ದಿನಗಳಲ್ಲಿ 25 ಟಿಎಂಸಿ ನೀರು ಸಂಗ್ರಹವಾಗಬಹುದು ಎಂಬ ಆಶಾಭಾವ ಮೂಡಿದೆ. ಮುಂಗಾರು ಮಳೆ ಇನ್ನೂ ಒಂದು ತಿಂಗಳು ಇರುವುದರಿಂದ 22 ಟಿಎಂಸಿ ವರೆಗೆ ನೀರು ಸಂಗ್ರಹವಾಗಬಹುದೆಂಬ ನಿರೀಕ್ಷೆಯಿದೆ.

ಇನ್ನೂ ಕಾವೇರಿ ನದಿ ನಿರು ಪ್ರಾಧಿಕಾರದ ಅಣತಿಯಂತೆ ಹೇಮೆಯಿಂದ ಪ್ರತಿ ದಿನ 5000 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಒಳಹರಿವು ಹೆಚ್ಚಾದರೆ ಯಾವುದೇ ತೊಂದರೆ ಇಲ್ಲಾ ಸಕಲೇಶಪುರ, ಮೂಡಿಗೆರೆ ,ಚಿಕ್ಕಮಗಳೂರು ಭಾಗದಲ್ಲಿ ಮಳೆಯ ಪ್ರಮಾಣ ಇಳಿಕೆಯಾದಲ್ಲಿ ಒಳಹರಿವು ಕಡಿಮೆಯಾಗಲಿದೆ.

# ಜಲಾಶಯದ ಇಂದಿನ ನೀರಿನ ಮಟ್ಟ
ಗರಿಷ್ಠ ಮಟ್ಟ: 2922 ಅಡಿ, 37 ಟಿಎಂಸಿ ಸಾಮಥ್ರ್ಯ. ಇಂದು 16.45 ಟಿಎಂಸಿ ಸಂಗ್ರಹವಿದೆ.
ಇಂದಿನ ಮಟ್ಟ: 2894, ಒಳ ಹರಿವು:12,015 ಕ್ಯೂಸೆಕ್, ಹೊರ ಹರಿವು: 5000 ಕ್ಯೂಸೆಕ್.

Facebook Comments