ಭಾರೀ ವಿಧ್ವಂಸಕ ಕೃತ್ಯವೆಸಗಲು ಕಾಶ್ಮೀರಕ್ಕೆ ನುಗ್ಗಿದ 12 ಜೆಇಎಂ ಉಗ್ರರು, ಹೈಅಲರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

High-Alertt

ಶ್ರೀನಗರ, ಜೂ.1-ಭಾರೀ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನದ ಜೈಷ್-ಎ-ಮಹಮದ್ (ಜೆಇಎಂ) ಭಯೋತ್ಪಾದನೆ ಸಂಘಟನೆಯ 12 ಉಗ್ರರು ಕಣಿವೆ ರಾಜ್ಯ ಕಾಶ್ಮೀರಕ್ಕೆ ನುಸುಳಿದ್ದು, ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ರಂಜಾನ್ ಮಾಸಾಚರಣೆ ವೇಳೆ ಸೇನಾ ಕಾರ್ಯಾಚರಣೆ ನಿಲುಗಡೆಯ ದುರ್ಲಾಭ ಪಡೆದು 12 ಜೆಇಎಂ ಉಗ್ರರು ಜಮ್ಮು ಮತ್ತು ಗಡಿ ನಿಯಂತ್ರಣ ರೇಖೆ(ಎಲ್‍ಇಸಿ) ಕಡೆಯಿಂದ ಕಾಶ್ಮೀರ ರಾಜ್ಯದೊಳಗೆ ನುಸುಳಿ ಬೃಹತ್ ಮಟ್ಟದಲ್ಲಿ ಆಕ್ರಮಣಗಳನ್ನು ನಡೆಸಲು ಸಜ್ಜಾಗಿದ್ದಾರೆ ಎಂದು ಭದ್ರತಾ ಪಡೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರದಿಗಳ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆ, ರಾಜಧಾನಿ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಿಂದ ಒಳ ನುಸುಳಿರುವ ಉಗ್ರರು ಪ್ರತ್ಯೇಕಗೊಂಡು ಮೂರರಿಂದ ನಾಲ್ಕು ಗುಂಪುಗಳಾಗಿ ವಿಂಗಡನೆಯಾಗಿದ್ದಾರೆ. ವಿವಿಧ ಸ್ಥಳಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಕುತಂತ್ರ ರೂಪಿಸಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ರಂಜಾನ್ ವೇಳೆ ಸೇನಾ ಕಾರ್ಯಾಚರಣೆ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ನಂತರ ಗಡಿ ಭಾಗದಲ್ಲಿ ಉಗ್ರರ ಚಟುವಟಿಕೆಗಳು ತೀವ್ರಗೊಂಡಿದ್ದು, ಒಳನುಸುಳುವಿಕೆ ಯತ್ನಗಳು ಮುಂದುವರಿದಿವೆ. ಕಾಶ್ಮೀರ ಕಣಿವೆಯ ಹಂದ್ವಾರ ಮತ್ತು ಕುಪ್ವಾರ ಜಿಲ್ಲೆಗಳಲ್ಲಿ ನಿನ್ನೆ ಯೋಧರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದರು.

Facebook Comments

Sri Raghav

Admin