“ಸಣ್ಣಪುಟ್ಟ ವಿಷಯಕ್ಕೆ ಪದೇ ಪದೇ ದೆಹಲಿಗೆ ಓಡಿ ಬರಬೇಡಿ” : ಬಿಎಸ್ವೈಗೆ ಹೈ’ಕಮಾಂಡ್’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.24- ಸಣ್ಣಪುಟ್ಟ ವಿಷಯಗಳಿಗೂ ದೆಹಲಿಗೆ ಬಾರದೆ ಸರ್ಕಾರ ಹಾಗೂ ಪಕ್ಷದ ನಡುವೆ ಯಾವುದೇ ರೀತಿಯ ಭಿನ್ನಮತವಿಲ್ಲದಂತೆ ಮುನ್ನಡೆಸಿಕೊಂಡು ಹೋಗಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಮತ್ತಿತರರನ್ನು ಭೇಟಿ ಮಾಡಿದ ವೇಳೆ ಪ್ರತಿಯೊಂದು ವಿಷಯಕ್ಕೂ ನೀವು ದೆಹಲಿಗೆ ಬಂದರೆ ರಾಜ್ಯದ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ.

ಸಂಪುಟ ವಿಸ್ತರಣೆ ಮಾಡುವುದು,ಯಾರನ್ನು ತೆಗೆದುಕೊಳ್ಳಬಹುದು, ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಸೇರಿದಂತೆ ಕೆಲವು ಪ್ರಮುಖ ತೀರ್ಮಾನಗಳನ್ನು ನೀವೇ ತೆಗೆದುಕೊಳ್ಳಿ. ಇಂತಹ ವಿಷಯಗಳಿಗೆ ದೆಹಲಿಗೆ ಬರುವ ಅಗತ್ಯವಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿಯಾಗಿರುವ ನಿಮಗೆ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಸಂಪೂರ್ಣ ಸ್ವತಂತ್ರವಿದೆ. ಆಡಳಿತಾತ್ಮಕವಾಗಿ ಪ್ರಮುಖ ತೀರ್ಮಾನ ಕೈಗೊಳ್ಳುವಾಗ ನಮ್ಮ ಸಲಹೆ ಪಡೆಯಿರಿ. ನಾವು ಅನಗತ್ಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ವರಿಷ್ಠರು ಸ್ಪಷ್ಟಪಡಿಸಿದ್ದಾರೆ.

ನೀವು ಪದೇ ಪದೇ ದೆಹಲಿಗೆ ಬಂದರೆ ಕೇಂದ್ರ ವರಿಷ್ಠರು ಮುಖ್ಯಮಂತ್ರಿಗಳನ್ನು ನಿಯಂತ್ರಣ ಮಾಡುತ್ತಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ. ಅಲ್ಲದೆ, ಸ್ವತಂತ್ರವಾಗಿ ಆಡಳಿತ ನಡೆಸಲು ಅವಕಾಶ ನೀಡುತ್ತಿಲ್ಲ ಎಂಬ ಆರೋಪಕ್ಕೆ ಸಿಲುಕುತ್ತೀರಿ. ಹೀಗಾಗಿ ನೀವು ಅಗತ್ಯವಿದ್ದಾಗ ಮಾತ್ರ ದೆಹಲಿಗೆ ಬರಬೇಕೆಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳಲ್ಲೂ ನಾವು ಮುಖ್ಯಮಂತ್ರಿಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಸರ್ಕಾರ ಮತ್ತು ಶಾಸಕರ ನಡುವೆ ಯಾವ ರೀತಿಯ ಗೊಂದಲ, ಇಲ್ಲವೇ ಭಿನ್ನಮತ ಉಂಟಾಗಬಾರದು ಎಂಬ ಕಾರಣಕ್ಕಾಗಿ ಕೆಲವು ವಿಷಯಗಳಲ್ಲಿ ಮಾತ್ರ ಅಗತ್ಯವಿದ್ದಾಗ ಸಲಹೆ ನೀಡುತ್ತೇವೆ .

ಮುಖ್ಯಮಂತ್ರಿಗೆ ಇರುವ ಅಧಿಕಾರದಲ್ಲಿ ಯಾವುದೇ ವರಿಷ್ಠರು ಮಧ್ಯ ಪ್ರವೇಶ ಮಾಡುವುದಿಲ್ಲ. ಇದು ನಮ್ಮ ಪಕ್ಷದ ನಿಯಮವೂ ಹೌದು. ಭ್ರಷ್ಟಾಚಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುವ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಮಧ್ಯ ಪ್ರವೇಶ ಮಾಡುವುದು ಅನಿವಾರ್ಯ ಎಂದಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ಅತಿವೃಷ್ಟಿ ಉಂಟಾಗಿ ಪರಿಸ್ಥಿತಿ ಅಷ್ಟು ಪೂರಕವಾಗಿಲ್ಲ. ನೆಲೆ ಕಳೆದುಕೊಂಡು ಸಂತ್ರಸ್ಥರಾಗಿರುವವರಿಗೆ ಸೂರು ಒದಗಿಸಬೇಕು. ಇದು ನಿಮ್ಮ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ದೆಹಲಿಗೆ ಬಂದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ವರಿಷ್ಠರು ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ನೀವು ಮುಖ್ಯಮಂತ್ರಿ ಆದ ಮೇಲೆ ನಾಲ್ಕು ಬಾರಿ ದೆಹಲಿಗೆ ಬಂದಿದ್ದೀರಿ. ನಮ್ಮ ಪಕ್ಷ ಆಡಳಿತ ವಿರುವ ಯಾವುದೇ ಮುಖ್ಯಮಂತ್ರಿಗಳು, ಸಚಿವರು ಪದೇ ಪದೇ ದೆಹಲಿಗೆ ಬರುವುದನ್ನು ಒಪ್ಪುವುದಿಲ್ಲ. ಇದಕ್ಕೆ ಪಕ್ಷವು ಅವಕಾಶ ನೀಡುವುದಿಲ್ಲ. ನೀವು ಮುಕ್ತವಾಗಿ ಆಡಳಿತ ನಡೆಸಲು ಸರ್ವ ಸ್ವತಂತ್ರರು, ಪ್ರತಿ ವಿಷಯದಲ್ಲೂ ನಾವು ಹಸ್ತಕ್ಷೇಪ ಮಾಡುವುದಿಲ್ಲ.

ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಅಮಿತ್ ಶಾ, ಜೆ.ಪಿ.ನಡ್ಡಾ ಬಿಎಸ್‍ವೈಗೆ ಸಲಹೆ ಮಾಡಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ತೆರಳುವ ವೇಳೆ ತುಸು ಮುಗುಮ್ ಆಗಿಯೇ ಹೊರಟಿದ್ದ ಯಡಿಯೂರಪ್ಪ ರಾಷ್ಟ್ರ ರಾಜಧಾನಿಯಿಂದ ಹಿಂತಿರುಗುವ ವೇಳೆ ಕೊಂಚ ಬಾರ ಕಳೆದುಕೊಂಡವರಂತಿದ್ದರು.

Facebook Comments

Sri Raghav

Admin