ಬಿಬಿಎಂಪಿಗೆ ಛೀಮಾರಿ ಹಾಕಿದ ಹೈಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.27- ಪದೇ ಪದೇ ಕೆರೆಗಳ ಕೋಡಿ ಒಡೆದು ಜನಸಾಮಾನ್ಯರು ಬೀದಿಪಾಲಾಗುತ್ತಿದ್ದರೂ ಬಿಬಿಎಂಪಿ ಏನು ಮಾಡುತ್ತಿದೆ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ.
ಹುಳಿಮಾವು ಕೆರೆ ಕೋಡಿ ಪ್ರಕರಣದಲ್ಲಿ ಸುಮಾರು 2 ಸಾವಿರ ಕುಟುಂಬಗಳು ತೊಂದರೆಗೆ ಸಿಲುಕಿದವು.

ಬಡಾವಣೆಗಳು ಜಲಾವೃತವಾಗಿದ್ದರಿಂದ ದಿನನಿತ್ಯದ ಬಳಕೆಯ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಹಾನಿಗೊಳಗಾದವು. ಜನ ಮನೆಯಲ್ಲಿ ಇರಲಾಗದೆ ಬೀದಿಯಲ್ಲಿ ನಿಲ್ಲಬೇಕಾಯಿತು. ಕೆರೆ ಕೋಡಿ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆದು ನ್ಯಾಯಮೂರ್ತಿಗಳು ಬಿಬಿಎಂಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ತಿಂಗಳಲ್ಲಿ ಮೂರು ಕೆರೆಗಳ ಕೋಡಿ ಒಡೆದಿದೆ. ಇದಕ್ಕೆ ಕಾರಣವೇನೆಂಬುದರ ಬಗ್ಗೆ ತನಿಖೆ ನಡೆಸಿ ತಕ್ಷಣ ವರದಿ ನೀಡುವಂತೆ ಬಿಬಿಎಂಪಿಗೆ ನ್ಯಾಯಮೂರ್ತಿಗಳು ಆದೇಶಿಸಿದ್ದರು. ಕೆರೆಗಳ ಒತ್ತುವರಿ ತೆರವುಗೊಳಿಸಲು, ಕೆರೆಗಳನ್ನು ಸಂರಕ್ಷಿಸಿ, ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲಗೊಂಡಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಹುಳಿಮಾವು ಕೆರೆ ಕೋಡಿ ಒಡೆದಿತ್ತು. ಅದಕ್ಕೂ ಒಂದು ವಾರ ಮುನ್ನ ರಾಜರಾಜೇಶ್ವರಿ ಕೆರೆ ಕೋಡಿ ಒಡೆದುಹೋಗಿತ್ತು. ಹದಿನೈದು ದಿನಗಳ ಹಿಂದೆ ದೊಡ್ಡಬಿದರಕಲ್ಲು ಕೆರೆಯ ಕೋಡಿ ಒಡೆದಿದ್ದನ್ನು ಗಮನಿಸಬಹುದು.

Facebook Comments