ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆಗಳ ನಿರ್ಮಾಣಕ್ಕೆ ಹೈಕೋರ್ಟ್ ನಿರ್ಬಂಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರತಿಮೆಗಳ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಮೈಸೂರು ಮಹಾನಗರ ಪಾಲಿಕೆ ಗನ್ ಹೌಸ್ ಸರ್ಕಲ್‍ನಲ್ಲಿ ಶಿವರಾತ್ರಿ ದೇಶಿಕೇಂದ್ರ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‍ನ ಹಂಗಾಮಿ ನ್ಯಾಯಮೂರ್ತಿಯಾಗಿದ್ದ ಸತೀಶ್ ಚಂದ್ರ ಶರ್ಮಾ ಹಾಗೂ ಸಚ್ಚಿನ್ ಶಂಕರ್ ಮಗದಂ ಅವರ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.

ಇನ್ನೂ ಮುಂದೆ ಯಾವುದೇ ಪ್ರತಿಮೆಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲು ಅನುಮತಿ ನೀಡಬಾರದು ಎಂದು ಆದೇಶಿಸಿದೆ.
ಈ ಮೊದಲು ಸುಪ್ರೀಂಕೋರ್ಟ್ ವರ್ಗಿಕೃತ ನಿರ್ದೇಶನ ನೀಡಿದ್ದು, ರಸ್ತೆಗಳ ಮಧ್ಯ ಭಾಗದಲ್ಲಿ, ರಸ್ತೆ ಬದಿಯಲ್ಲಿ, ಪಾದಚಾರಿ ರಸ್ತೆಗಳಲ್ಲಿ, ಪಾರ್ಕ್, ಆಟದ ಮೈದಾನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರತಿಮೆಗಳ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದೆ.

ಕೇಂದ್ರ ಸರ್ಕಾರ ಮತ್ತು ಗುಜರಾತ್ ಸರ್ಕಾರ ಹಾಗೂ ಇತರರ ನಡುವಿನ ಪ್ರಕರಣ ದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪಾಲನೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊಣೆಗಾರರಾಗಿದ್ದಾರೆ. ರಾಜ್ಯಾದ್ಯಂತ ಸುಪ್ರೀಂಕೋರ್ಟ್‍ನ ಆದೇಶ ಉಲ್ಲಂಘನೆಯಾಗದಂತೆ ಆಡಳಿತ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ವಿದ್ಯುತ್ ಕಂಬ, ಬೀದಿ ದೀಪ, ಟ್ರಾಫಿಕ್ ಸಿಗ್ನಲ್ ಅಳವಡಿಕೆ ಹಾಗೂ ಇತರ ಮೂಲ ಸೌಲಭ್ಯ ಕಲ್ಪಿಸುವಾಗಲೂ ಸುಪ್ರೀಂಕೋರ್ಟ್‍ನ ತೀರ್ಪು ಮತ್ತು ರಾಜ್ಯ ಸರ್ಕಾರ 2017ರ ಮಾ.3 ಮತ್ತು ಆ.28ರಂದು ಹೊರಡಿಸಿರುವ ಆದೇಶಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.

Facebook Comments