ಸಂಚಾರಿ ಪೊಲೀಸರ ನೆರವಿಗೆ ಬಂತು ಹೈಟೆಕ್ ಚೌಕಿ..! ಇದರ ವಿಶೇಷತೆಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 8- ಬಿಸಿಲು, ಮಳೆ, ಧೂಳನ್ನು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗಾಗಿ ಹೈಟೆಕ್ ಪೊಲೀಸ್ ಚೌಕಿಗಳನ್ನು ನಿರ್ಮಿಸಲು ಬಿಬಿಎಂಪಿ ತೀರ್ಮಾನಿಸಿದೆ.

ಖಾಸಗಿ ಸಹಭಾಗಿತ್ವ ಯೋಜನೆಯಡಿ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ನಗರದ 340 ಸ್ಥಳಗಳಲ್ಲಿ ಹೈಟೆಕ್ ಪೊಲೀಸ್ ಚೌಕಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರಾರಂಭಿಕ ಹಂತವಾಗಿ ಹಡ್ಸನ್ ವೃತ್ತ, ಟ್ರಿನಿಟಿ ವೃತ್ತ, ಶಾಂತಿನಗರ ಜಂಕ್ಷನ್, ಪೊಲೀಸ್ ಕಾರ್ನರ್, ಮೇಕ್ರಿ ಸರ್ಕಲ್ ಸೇರಿದಂತೆ 23 ಕಡೆ ಹೈಟೆಕ್ ಪೊಲೀಸ್ ಚೌಕಿ ನಿರ್ಮಾಣಕ್ಕೆ ಮೇಯರ್ ಗೌತಮ್‍ಕುಮಾರ್ ಇಂದು ಚಾಲನೆ ನೀಡಿದರು.

20 ವರ್ಷಗಳ ಜಾಹೀರಾತು ಆಧಾರದ ಮೇಲೆ ನಗರದ 340 ಕಡೆ ಹೈಟೆಕ್ ಪೆÇಲೀಸ್ ಚೌಕಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಬಿಬಿಎಂಪಿಗೆ ವಾರ್ಷಿಕ ಸುಮಾರು 20 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ ಎಂದು ಮೇಯರ್ ತಿಳಿಸಿದರು.

ಚೌಕಿಯ ಮುಂದೆ 15 ಚದರ ಮೀಟರ್ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದ್ದು, ಅದರಲ್ಲಿ ಜಾಹೀರಾತು ಪ್ರಕಟಿಸಲಾಗುವುದು. ನೆಲಬಾಡಿಗೆ ಮತ್ತು ಜಾಹೀರಾತು ಮೂಲಕ ಪ್ರತಿ ವರ್ಷ 20 ಲಕ್ಷ ರೂ.ಗಳ ಆದಾಯ ಬರಲಿದೆ ಎಂದರು.

ಆರಂಭದಲ್ಲಿ 23 ಚೌಕಿಗಳಿಗೆ ಚಾಲನೆ ನೀಡಲಾಗಿದ್ದು, ಇತರೆ ಸ್ಥಳಗಳಲ್ಲಿ ಹಂತ ಹಂತವಾಗಿ ಕಿಯೋಸ್ಕ್ ಸ್ಥಾಪನೆ ಮಾಡಲಾಗುವುದು ಎಂದು ಮೇಯರ್ ಹೇಳಿದರು.

ತಲಾ 8 ಲಕ್ಷ ರೂ. ಅಂದಾಜಿನಲ್ಲಿ ನಿರ್ಮಿಸಲಾಗುತ್ತಿರುವ ಚೌಕಿಗಳಲ್ಲಿ ಸಂಚಾರ ಪೊಲೀಸರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣ, ಫ್ಯಾನ್, ವಾಕಿಟಾಕಿ, ಧ್ವನಿವರ್ಧಕ, ಗಾಳಿ ಶುದ್ಧೀಕರಿಸುವ ಯಂತ್ರ, ಕುರ್ಚಿ, ಟೇಬಲ್, ಎಕ್ಸಾಸ್ಟ್ ಫ್ಯಾನ್, ಸಾರ್ವಜನಿಕ ಕುಂದು-ಕೊರತೆ ಬಾಕ್ಸ್, ಕುಡಿಯುವ ನೀರು, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಸಿಸಿಟಿವಿ, ಎಲ್‍ಇಡಿ ಸ್ಕ್ರೀನ್ ಇರುತ್ತದೆ ಎಂದು ಅವರು ತಿಳಿಸಿದರು.

# ಸಾಮಾಜಿಕ ಅಂತರವೇ ಕಣ್ಮರೆ:
ಹೈಟೆಕ್ ಪೊಲೀಸ್ ಚೌಕಿ ಉದ್ಘಾಟನೆ ಸಂದರ್ಭದಲ್ಲಿ ಸಾಮಾಜಿಕ ಅಂತರವೇ ಕಣ್ಮರೆಯಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಸಾಮಾಜಿಕ ಅಂತರವನ್ನೇ ಮರೆತು ಕಾರ್ಯಕ್ರಮದಲ್ಲಿ ಗುಂಪುಗೂಡಿರುವುದು ಕಂಡುಬಂತು.

ಇದರ ಜತೆಗೆ ಕಾರ್ಯಕ್ರಮ ನಡೆಯುವ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಹೀರಾತು ಫಲಕಗಳ ಅಬ್ಬರವೂ ಜೋರಾಗಿತ್ತು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್, ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಮತ್ತಿತರರು ಹಾಜರಿದ್ದರು.

Facebook Comments

Sri Raghav

Admin