ಹಿಂದಿ ದಿವಸ್ ಆಚರಣೆ ವಿರೋಧಿಸಿ ಕರವೇ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ಕೇಂದ್ರ ಸರ್ಕಾರ ಸೆ.14ರಂದು ಹಿಂದಿ ದಿವಸ್ ಆಚರಣೆಗೆ ಮುಂದಾಗಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಂದು ರಾಜ್ಯದ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್‍ಗಳ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ.  ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ್ ಆಚರಣೆ ನಮಗೆ ಬೇಕಾಗಿಲ್ಲ. ಭಾಷಾ ವೈವಿಧ್ಯತೆಯ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಕೂಡ ಒಂದು. ಅದಕ್ಕೆ ವಿಶೇಷ ಸ್ಥಾನಮಾನ, ಪ್ರೋತ್ಸಾಹ ನೀಡುವುದು ಅನ್ಯಾಯ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಭಾರತ ಸಂವಿಧಾನದ 14ನೆ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕು ನೀಡುತ್ತದೆ. ಹಿಂದಿ ದಿವಸ್ ಆಚರಣೆ ಮೂಲಕ ಇತರ ಭಾರತೀಯ ಭಾಷೆಗಳನ್ನು ಕಡೆಗಣಿಸಿ ಇತರೆ ಭಾಷಿಗರನ್ನು ಎರಡನೆ ದರ್ಜೆ ಪ್ರಜೆಗಳನ್ನಾಗಿಸುವುದು ಅತ್ಯಂತ ಅಕ್ಷಮ್ಯವಾಗಿದೆ. ಇದು ಇನ್ನು ಮೇಲಾದರೂ ನಿಲ್ಲಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿ ನುಡಿಯೊಂದನ್ನು ಇಡೀ ದೇಶದಲ್ಲಿ ಬೆಳೆಸುವ ಪ್ರಮುಖ ಉದ್ದೇಶ ಹಿಂದಿ ಭಾಷಿಗರಿಗೆ ಎಲ್ಲ ರಾಜ್ಯಗಳಲ್ಲೂ ಅಗತ್ಯ ಸೇವೆಗಳನ್ನು ಕಲ್ಪಿಸುವುದೇ ಆಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಈ ಮೂಲಕ ಇತರ ಭಾಷಿಗರಿಗೆ ಇಲ್ಲದ ಸೌಲಭ್ಯಗಳನ್ನು ಹಿಂದಿ ಭಾಷಿಗರಿಗೆ ಒದಗಿಸಲಾಗುತ್ತಿದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಒಕ್ಕೂಟ ಸರ್ಕಾರದ ನೇತೃತ್ವವನ್ನು ಯಾವುದೇ ರಾಜಕೀಯ ಪಕ್ಷ ಹಿಡಿದರೂ ಹಿಂದಿ ಏರಿಕೆ ಮಾಡಲಾಗುತ್ತಿದೆ. ಕಳೆದ 20 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆ ಹಿಂದಿ ದಿವಸ್ ಆಚರಣೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿದೆ. ಭಾರತದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನ ದೊರೆಯುವವರೆಗೂ ನಮ್ಮ ಈ ಪ್ರತಿರೋಧ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಸಂವಿಧಾನ 343 ರಿಂದ 351ರ ವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತಂದು ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ತೆಗೆದುಹಾಕಬೇಕು. ಇದನ್ನು ಮಾಡದ ಹೊರತು ಭಾರತೀಯರೆಲ್ಲರೂ ಸಮಾನರಾಗಲು ಸಾಧ್ಯವಿಲ್ಲ. ಭಾಷೆಯ ಹೆಸರಿನ ತಾರತಮ್ಯ ಕೊನೆಗೊಳ್ಳಬೇಕು. ಹಿಂದಿ ಏರಿಕೆ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಗರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ.

ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಆಸ್ಮಿತೆ, ಸಂಸ್ಕøತಿ, ಪರಂಪರೆ, ಬದುಕು ಅಪಾಯಕ್ಕೆ ಸಿಲುಕಿದೆ. ತಂತ್ರಜ್ಞಾನ ಮುಂದುವರೆದಿರುವುದರಿಂದ ಭಾರತದಲ್ಲಿ ಬಹುಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದುವುದಕ್ಕೆ ಅವಕಾಶವಿದೆ.

ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ದೇಶದ ಎಲ್ಲ ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿಯವರು ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಭಾವನೆ ತೊಲಗಬೇಕು. ಈ ಹಿನ್ನೆಲೆಯಲ್ಲಿ ಸೆ.14ರಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯಾದ್ಯಂತ ಎಲ್ಲ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್‍ಗಳ ಮುಂದೆ ಬೆಳಗ್ಗೆಯಿಂದ ಸಂಜೆವರೆಗೆ ವಿಭಿನ್ನ ರೀತಿಯ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

Facebook Comments