ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳ ಅರ್ಚಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಮುಜರಾಯಿ ಇಲಾಖೆ ವ್ಯಾಪ್ತಿಯ ಎ ಮತ್ತು ಬಿ ವರ್ಗದ ದೇವಸ್ಥಾನಗಳನ್ನು ಹೊರತುಪಡಿಸಿ ಸಿ ವರ್ಗದ ಸುಮಾರು 35 ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ಅರ್ಚಕ ವೃತ್ತಿಯನ್ನೇ ನಂಬಿಕೊಂಡಿದ್ದವರ ಬದುಕು ಶೋಚನೀಯವಾಗಿದೆ.

ಇವರು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಚಾಲಕರು, ನೇಕಾರರಿಗೆ ನೀಡಿದಂತೆ ನಮಗೂ ಪ್ಯಾಕೇಜ್ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ. ಎ ವರ್ಗದ 177 ಹಾಗೂ ಬಿ ವರ್ಗದ 130 ದೇವಸ್ಥಾನಗಳನ್ನು ಹೊರತುಪಡಿಸಿದರೆ ರಾಜ್ಯದಲ್ಲಿರುವ ಸುಮಾರು 35 ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿರುವ ಅರ್ಚಕರು ಕಳೆದ ಎರಡೂವರೆ ತಿಂಗಳಿನಿಂದ ಯಾವುದೇ ಆದಾಯವಿಲ್ಲದೆ ಪರಿತಪಿಸುತ್ತಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಿಸಿದ ಪರಿಣಾಮ ಎರಡು ತಿಂಗಳಿನಿಂದ ಎಲ್ಲ ದೇವಾಲಯಗಳನ್ನೂ ಮುಚ್ಚಲಾಯಿತು. ದೇವಾಲಯಗಳನ್ನೇ ನಂಬಿ ಬದುಕುತ್ತಿದ್ದ ಅರ್ಚಕರ ಬದುಕು ಬೀದಿಗೆ ಬಂದಿದೆ.

ಕೆಲವೊಂದು ದೇವಾಲಯಗಳನ್ನು ಹೊರತುಪಡಿಸಿ ಗ್ರಾಮಾಂತರ ಪ್ರದೇಶಗಳಲ್ಲಿದ್ದ ದೇವಾಲಯಗಳಲ್ಲಿನ ಅರ್ಚಕರ ಬದುಕು ಬಹಳ ಶೋಚನೀಯವಾಗಿತ್ತು. ಪವಿತ್ರ ಅರ್ಚಕ ವೃತ್ತಿ ಮಾಡುವವರು ತಮ್ಮ ಪರಿಸ್ಥಿತಿಯನ್ನು ಹೇಳುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವಂತಾಗಿತ್ತು.

ಆದರೂ ಸರ್ಕಾರಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿದ್ದರು. ಸರ್ಕಾರ ಲಕ್ಷಾಂತರ ಜನ ಕಾರ್ಮಿಕರು, ಚಾಲಕರು, ನೇಕಾರರು, ವಿವಿಧ ಸಮುದಾಯಗಳವರಿಗೆ 5000ರೂ. ನೀಡುವ ಘೋಷಣೆ ಮಾಡಿದೆ.

ದಿನಸಿ ಕಿಟ್‍ಗಳನ್ನು ನೀಡಿದೆ. ಅದೇ ರೀತಿ ನಮಗೂ ಸಹಾಯ ನೀಡಬೇಕೆಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾೀವಂತರ ಒಕ್ಕೂಟ ಆಗ್ರಹಿಸಿದೆ.

ಈವರೆಗೆ ಆದಾಯ ಬರುವ ದೇವಾಲಯಗಳಲ್ಲಿ ಸುಮಾರು 14 ಸಾವಿರ ಜನರಿಗೆ ದಿನಸಿ ಕಿಟ್‍ಗಳನ್ನು ನೀಡಲಾಗಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅರ್ಚಕರಿದ್ದಾರೆ. ಈ ವೃತ್ತಿಯನ್ನೇ ನಂಬಿ ಬದುಕುತ್ತಿದ್ದಾರೆ. ಅವಲಂಬಿತರು ಸೇರಿದಂತೆ ಸುಮಾರು 5 ಲಕ್ಷ ಮಂದಿ ಇದ್ದಾರೆ.

ಎರಡು ತಿಂಗಳಿನಿಂದ ಯಾವುದೇ ಪೂಜೆ-ಪುನಸ್ಕಾರ, ಧಾರ್ಮಿಕ ಕಾರ್ಯಕ್ರಮಗಳಿಲ್ಲದೆ ಪರದಾಡುತ್ತಿದ್ದಾರೆ. ಸರ್ಕಾರ ಇವರ ನೆರವಿಗೆ ಬರಬೇಕು. ಬೇರೆ ಸಮುದಾಯಗಳಿಗೆ ನೀಡಿದಂತೆ ಅರ್ಚಕ ಸಮುದಾಯಕ್ಕೂ ನೆರವು ನೀಡಬೇಕೆಂದು ಆಗ್ರಹಿಸಿರುವ ಇವರು ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

ಮುಜರಾಯಿ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದ ದೇವಾಲಯಗಳಿಗೆ ಪೂಜೆಗೆಂದು ಸರ್ಕಾರ ವರ್ಷಕ್ಕೆ 48 ಸಾವಿರ ರೂ. ನೀಡುತ್ತದೆ. ಅಲ್ಲಿನ ಅರ್ಚಕರಿಗೆ ಯಾವುದೇ ಸಂಬಳವಿಲ್ಲ. ಇದರಲ್ಲೇ ಎಲ್ಲವನ್ನೂ ನಿಭಾಯಿಸಬೇಕು.

ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ ಸಂಬಳ ನೀಡಲಾಗುತ್ತದೆ. ಆದಾಯ ಬರುವ ದೇವಾಲಯಗಳಲ್ಲಿ ಅರ್ಚಕ ವೃತ್ತಿ ಮಾಡುವವರಿಗೆ ಆದಾಯವಿರುತ್ತದೆ. ಆದರೆ, ಆದಾಯವಿಲ್ಲದ ದೇವಾಲಯಗಳಲ್ಲಿ ಅರ್ಚಕ ವೃತ್ತಿ ಮಾಡುವವರಿಗೆ ಸರ್ಕಾರ ನೆರವಿಗೆ ಬರಬೇಕು.

ಅದು ಇಂತಹ ಸಂಕಷ್ಟ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂಬುದು ಅವರ ಆಗ್ರಹವಾಗಿದೆ. ಸರ್ಕಾರ ಹಾಗೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟ ದೇವಾಲಯಗಳಲ್ಲಿ ಭಕ್ತರ ಪ್ರವೇಶ ಮತ್ತು ಅವರು ನಡೆಸುವ ಸೇವಾ ಕೈಂಕರ್ಯಗಳನ್ನು ಕೂಡ ಸ್ಥಗಿತಗೊಳಿಸಲಾಗಿದೆ.

ಭಕ್ತರ ಪ್ರವೇಶವಿಲ್ಲದೆ ಎರಡೂವರೆ ತಿಂಗಳು ಕಳೆದಿದೆ. ಜೂನ್ 1ರಿಂದ ದೇವಾಲಯಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶ ನೀಡಿದೆ. ಲಾಕ್‍ಡೌನ್ ನಿಯಮಗಳನ್ನು ಪಾಲಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಶರತ್ತುಗಳನ್ನೂ ವಿಸಿದೆ. ಈ ಬಗ್ಗೆ ಇನ್ನೂ ಮಾರ್ಗಸೂಚಿ ರೂಪಿಸಿಲ್ಲ.

ಅರ್ಚಕ ವಲಯ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ನೆರವಿಗೆ ಬರಬೇಕೆಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರ ಸಿದ್ಧತೆ: ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾಗಿದ್ದ ಹಲವು ವರ್ಗದ ಜನರಿಗೆ ಸರ್ಕಾರ ಈಗಾಗಲೇ 2272 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದ್ದು, ಅರ್ಚಕ ವೃತ್ತಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿದ್ದವರಿಗೂ ಪ್ಯಾಕೇಜ್ ಸಿದ್ಧಗೊಳ್ಳುತ್ತಿದೆ.

ಅರ್ಚಕರು ಮತ್ತು ಸಹಾಯಕರು ಸೇರಿ 34 ಸಾವಿರ ಮಂದಿಗೆ 5 ಸಾವಿರ ರೂ. ಪರಿಹಾರ ನೀಡಿದರೆ 17 ಕೋಟಿ ರೂ. ಖರ್ಚು ಬರಲಿದೆ. ಇದಲ್ಲದೆ, ಖಾಸಗಿ ದೇವಸ್ಥಾನಗಳಲ್ಲಿರುವ ಅರ್ಚಕರನ್ನು ಗುರುತಿಸುವುದು ಮತ್ತು ಪರಿಹಾರ ನೀಡುವುದು ಹೇಗೆ ಎಂಬುದರ ಬಗ್ಗೆ ಸಮಾಲೋಚನೆಗಳು ನಡೆಯುತ್ತಿದ್ದು, ಶೀಘ್ರವೇ ಪ್ಯಾಕೇಜ್ ಘೋಷಿಸುವ ತೀರ್ಮಾನ ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಇನ್ನು ಧಾರ್ಮಿಕ ಇಲಾಖೆಯ ದೇವಸ್ಥಾನಗಳಲ್ಲಿ ಅರ್ಚಕ ಸಿಬ್ಬಂದಿಗೆ 7 ತಿಂಗಳ ತಸ್ತಿಕ್‍ಅನ್ನು ಮುಂಗಡವಾಗಿ ನೀಡಲು ತೀರ್ಮಾನಿಸಿದ್ದು, ಪ್ರಸ್ತುತ 3 ತಿಂಗಳ ತಸ್ತಿಕ್ ಹಣ 33.65 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

Facebook Comments

Sri Raghav

Admin