ತಾಯ್ನಾಡಿಗೆ ಮರಳಿದರೂ ಸೌಲಭ್ಯವಂಚಿತರಾದ ಪಾಕ್ ಹಿಂದೂಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.17-ಪಾಕಿಸ್ತಾನದಲ್ಲಿದ್ದ 150ಕ್ಕೂ ಹೆಚ್ಚು ಹಿಂದೂಗಳು ಭಾರತಕ್ಕೆ ವಾಪಸ್ಸಾಗಿದ್ದು, ಇದೀಗ ಅವರಿಗೆ ತಾಯ್ನಾಡಿನಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಆಹಾರ, ನೀರು, ವಿದ್ಯುತ್, ಉದ್ಯೋಗ ಭದ್ರತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಪರಿತಪಿಸುತ್ತಿದ್ದಾರೆ.

150ಕ್ಕೂ ಹೆಚ್ಚು ಪಾಕಿಸ್ತಾನಿ ಹಿಂದು ವಲಸಿಗರು ದೆಹಲಿಯ ವಾಜಿರಾಬಾದ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ವಾಸಕ್ಕೆ ಗುಡಿಸಲುಗಳಿಲ್ಲದೆ ತಾತ್ಕಾಲಿಕ ಟೆಂಟ್‍ಗಳನ್ನು ನಿರ್ಮಿಸಿಕೊಂಡು ಬದುಕುವಂತಾಗಿದೆ. ಸರ್ಕಾರದ ನೆರವಿಲ್ಲದೆ ಇರುವ ಇವರಿಗೆ ಜೀವನೋಪಾಯಕ್ಕೆ ಸೂಕ್ತ ಉದ್ಯೋಗವೂ ಇಲ್ಲದೆ ಪರದಾಡುವಂತಾಗಿದೆ.

ಆಕಾಂಕ್ಷೆಗಳನ್ನು ಇಟ್ಟುಕೊಂಡು ತಾಯ್ನಾಡಿಗೆ ಹಿಂದಿರುಗಿದ ಇವರ ಬದುಕು ಮೂರಾಬಟ್ಟೆಯಾಗಿದೆ. ಮೂಲಭೂತ ಸೌಕರ್ಯಗಳಾದ ವಿದ್ಯುತ್, ಆಹಾರ, ನೀರು ಸರಬರಾಜು, ಶೌಚಾಲಯಗಳಿಲ್ಲದೆ ವಂಚಿತರಾಗಿದ್ದಾರೆ. ಶುದ್ದ ಕುಡಿಯುವ ನೀರು ಸಿಗದೆ ಪರಿತಪಿಸುತ್ತಿದ್ದಾರೆ. ಬೇಯಿಸಿದ ಅನ್ನ ಉಪ್ಪು ಇದಷ್ಟೇ ಆಹಾರವಾಗಿದೆ.

ಪುರುಷರು ಉದ್ಯೋಗವರಸಿ ಅಲೆಯುತ್ತಿದ್ದರೂ ಅವರಿಗೆ ಸರ್ಕಾರಿ ಗುರುತಿನಚೀಟಿಗಳಿಲ್ಲದೆ ನೌಕರಿ ಸಿಗುತ್ತಿಲ್ಲ. ಆದರೂ ತಾಯ್ನಾಡಿಗೆ ವಾಪಸ್ ಆಗಿರುವುದಕ್ಕೆ ಸಂತೋಷವಾಗಿದೆ ಎಂದು ಪಾಕ್‍ನಿಂದ ಹಿಂದಿಗಿರುವ ಹಿಂದೂಗಳು ಹೇಳಿಕೊಂಡಿದ್ದಾರೆ.

Facebook Comments