ಐತಿಹಾಸಿಕ ಅಯೋಧ್ಯೆ ತೀರ್ಪು ನೀಡಿದ ನ್ಯಾಯಮೂರ್ತಿಗಳ ಬಗ್ಗೆ ನಿಮಗೆ ಗೊತ್ತೇ….?

ಈ ಸುದ್ದಿಯನ್ನು ಶೇರ್ ಮಾಡಿ

ಶತಮಾನಗಳಿಗೂ ಹೆಚ್ಚು ಕಾಲದ ರಾಮ ಜನ್ಮಭೂಮಿ ವಿವಾದಕ್ಕೆ ತೆರೆ ಕಂಡಿದೆ. ಇತಿಹಾಸಕ್ಕೆ ಹೊಸದೊಂದು ಅಧ್ಯಾಯವೇ ಸೇರ್ಪಡೆಯಾಗಿದೆ.ಸುದೀರ್ಘ ಕಾಲದವರೆಗೆ ನಿಷ್ಪಕ್ಷಪಾತ ವಿಚಾರಣೆ ನಡೆಸಿದ ನ್ಯಾಯಪೀಠ ಐವರು ನ್ಯಾಯ ಮೂರ್ತಿಗಳಿಗೆ ಈ ಶ್ರೇಯಸ್ಸು ಸಲ್ಲಬೇಕು.

ಮುಖ್ಯ ನ್ಯಾ.ರಂಜನ್ ಗೋಗೊಯ್: ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಮೂಲತಃ ಅಸ್ಸೋಂ ರಾಜ್ಯದವರು. ಈಶಾನ್ಯ ರಾಜ್ಯಗಳ ಭಾಗದಿಂದ ನ್ಯಾಯಾಂಗ ವ್ಯವಸ್ಥೆಯ ಉನ್ನತ ಪದವಿಯಾದ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸಿರುವವರಲ್ಲಿ ಗೋಗೊಯ್ ಮೊದಲಿಗರು.

ಇವರು 1978ರಲ್ಲಿ ಗುವಾಹಟಿಯ ಹೈಕೋರ್ಟ್ ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಆರಂಭಿಸಿದರು. 2001ರ ಫೆ.28ರಂದು ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಾಧೀಶರಾದ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ಗಳಲ್ಲಿ ರಂಜನ್ ಗೋಗೊಯ್ ಸೇವೆ ಸಲ್ಲಿಸಿದ್ದಾರೆ.

2012ರ ಏಪ್ರಿಲ್‍ನಲ್ಲಿ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದರು. ವೃತ್ತಿ ಜೀವನದಲ್ಲಿ ಹಲವು ಪ್ರಕರಣಗಳನ್ನು ಆಲಿಸಿದ್ದು, ಅವುಗಳಲ್ಲಿ ಅಯೋಧ್ಯೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ ಐತಿಹಾಸಿಕ ಪ್ರಕರಣಗಳಾಗಿವೆ. ಇದೇ ನವೆಂಬರ್ 17ರಂದು ನಿವೃತ್ತಿ ಹೊಂದಲಿದ್ದಾರೆ.

ನ್ಯಾ. ಶರದ್ ಅರವಿಂದ್ ಬೋಬ್ಡೆ: ರಂಜನ್ ಗೋಗೊಯ್ ಅವರ ನಿವೃತ್ತಿ ಬಳಿಕ ನ್ಯಾ.ಶರದ್ ಅರವಿಂದ್ ಬೋಬ್ಡೆ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಲಿದ್ದಾರೆ. 2000ರಲ್ಲಿ ಬಾಂಬೆ ಹೈಕೋರ್ಟ್‍ನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ಬೋಬ್ಡೆ ಅವರು ನೇಮಕಗೊಂಡರು. ಮಧ್ಯ ಪ್ರದೇಶದ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಮೂಲದವರಾಗಿರುವ ಬೋಬ್ಡೆ ಅವರು ಏಪ್ರಿಲ್ 2013ರಲ್ಲಿ ಸುಪ್ರಿಂಕೋರ್ಟ್‍ಗೆ ಬಡ್ತಿ ಪಡೆದರು. 63 ವರ್ಷದ ಬೋಬ್ಡೆ ನವೆಂಬರ್ 17ರ ನಂತರ ಸಿಜೆಐ ಆಗಿ 18 ತಿಂಗಳು ಕಾರ್ಯ ನಿರ್ವಹಿಸಲಿದ್ದಾರೆ.

ನ್ಯಾ.ರಂಜನ್ ಗೋಗೊಯ್ ನಿವೃತ್ತಿ ನಂತರ ನ.18ರಿಂದ ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನ್ಯಾ. ಡಿ.ವೈ.ಚಂದ್ರಚೂಡ್: ಡಿ.ವೈ.ಚಂದ್ರಚೂಡ್ ಮೇ 2016ರಲ್ಲಿ ಸುಪ್ರೀಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. ಇವರು ಸುಪ್ರೀಂಕೋರ್ಟ್‍ನಲ್ಲಿ ಮುಖ್ಯ ನ್ಯಾಯಾಧೀಶರಾಗಿ ಅತಿ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ವೈ.ವಿ. ಚಂದ್ರಚೂಡ್ ಅವರ ಪುತ್ರ. ಹಾರ್ವರ್ಡ್‍ನಲ್ಲಿ ಕಾನೂನು ಪದವಿ ಪಡೆದಿರುವ ಚಂದ್ರಚೂಡ್ ಬಾಂಬೆ ಮತ್ತು ಅಲಹಾಬಾದ್ ಹೈಕೋರ್ಟ್‍ನಲ್ಲಿ ಸೇವೆ ಸಲ್ಲಿಸಿದ್ದಾರೆ.

ನ್ಯಾ.ಅಶೋಕ್ ಭೂಷಣ್: 1979ರಲ್ಲಿ ನ್ಯಾ.ಅಶೋಕ್ ಭೂಷಣ್ ಅಲಹಾಬಾದ್ ಹೈಕೋರ್ಟ್‍ನಲ್ಲಿ ವಕೀಲರಾಗಿ ತಮ್ಮ ವೃತ್ತಿ ಅರಂಭಿಸಿದರು. 2001ರಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜುಲೈ 2014ರಲ್ಲಿ ಕೇರಳ ಹೈಕೋರ್ಟ್‍ಗೆ ವರ್ಗಾವಣೆಗೊಂಡು ಮಾರ್ಚ್ 2015ರಲ್ಲಿ ಕೇರಳ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಮೇ 13, 2016ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡು ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾ.ಅಬ್ದುಲ್ ನಜೀರ್: ಇವರು ಕರ್ನಾಟಕ ಮೂಲದವರು. 1983 ಫೆಬ್ರವರಿಯಲ್ಲಿ ಕರ್ನಾಟಕದ ಹೈಕೋರ್ಟ್‍ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. 20 ವರ್ಷಗಳ ಕಾಲ ನ್ಯಾ.ಅಬ್ದುಲ್ ನಜೀರ್ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. 2003ರಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ತದನಂತರ ಖಾಯಂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು. ಫೆಬ್ರವರಿ 17, 2017ರಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆದರು.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ರಂಜನ್ ಗೋಗೊಯ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಸರ್ವಾನುಮತದಿಂದ ಈ ತೀರ್ಪನ್ನು ನೀಡಿದೆ ಸಾಕ್ಷಿ ಪುರಾವೆಗಳ ಜತೆಗೆ ಹಿಂದೂ-ಮುಸ್ಲಿಂ ಧರ್ಮದ ಜನರ ನಂಬಿಕೆಗಳನ್ನೂ ಪರಿಗಣಿಸಿ ತೀರ್ಪು ನೀಡಿರುವುದು ವಿಶೇಷ ಸಂಗತಿಯಾಗಿದೆ. ಇಂತಹ ತೀರ್ಪು ಬೇರೆ ಯಾರೂ ನೀಡಲು ಸಾಧ್ಯವಿಲ್ಲ. ಇದೊಂದು ಭಾರತದ ಇತಿಹಾಸದಲ್ಲಿ ಎಂದೆಂದಿಗೂ ಸಾವಿರಾರು ವರ್ಷಗಳು ಯಾರೂ ಮರೆಯಲಾಗದ ನೆನಪಿಡಬಹುದಾದ ಐತಿಹಾಸಿಕವಾದ ತೀರ್ಪಾಗಿದೆ.

ಈ ಚರಿತ್ರಾರ್ಹವಾದ ತೀರ್ಪು ಅತಿ ದೊಡ್ಡ ಇತಿಹಾಸವಾಗಿ ಸದಾ ಕಾಲ ಉಳಿಯುತ್ತದೆ. ಈ ಐತಿಹಾಸಿಕ ತೀರ್ಪು ನಮ್ಮ ಪವಿತ್ರವಾದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಸುಪ್ರೀಂಕೋರ್ಟ್ ನೀಡಿರುವ ಈ ಐತಿಹಾಸಿಕ ತೀರ್ಪನ್ನು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ನಮ್ಮ ಮುಸ್ಲಿಂ ಬಾಂಧವರಿಗೂ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿಯೇ ಜಾಗ ನೀಡಿರುವುದು ಸಂಪೂರ್ಣ ನ್ಯಾಯಸಮ್ಮತವಾಗಿದೆ

ಯಾರ ಭಾವನೆಗಳಿಗೂ ನೋವುಂಟಾಗದಂತೆ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ತಾಳ್ಮೆ ಹಾಗೂ ಸಹನೆಯಿಂದ ನಾವೆಲ್ಲರೂ ವಿಶಾಲವಾದ ಮನಸ್ಸಿನಿಂದ ಒಪ್ಪಿಕೊಳ್ಳಲೇಬೇಕು. ಭಾರತದ ಭಾವೈಕ್ಯತೆ ಕಾಪಾಡುವ ಹೊಣೆ ನಮ್ಮೆಲ್ಲರ ಮಹತ್ತರವಾದ ಜವಾಬ್ದಾರಿಯಾಗಿದೆ. ಈ ತೀರ್ಪಿನ ಆಧಾರದಲ್ಲಿ ಯಾರೂ ಪ್ರತಿಭಟನೆ ಹಾಗೂ ಸಂಭ್ರಮಾಚರಣೆ ಮಾಡುವುದು ಸೂಕ್ತವಲ್ಲ. ಇಂದು ನಾವೆಲ್ಲರೂ ಅತ್ಯಂತ ವಿಶಾಲವಾದ ಮನಸ್ಸಿನಿಂದ ಸರ್ವೋಚ್ಚ ನ್ಯಾಯಾಲಯದ ಈ ಐತಿಹಾಸಿಕ ತೀರ್ಪನ್ನು ಸಂಪೂರ್ಣ ಸ್ವಾಗತಿಸೋಣ.

ಜಿ. ಎ.ಜಗದೀಶ್,
ಪೊಲೀಸ್ ಅಧೀಕ್ಷಕರು( ನಿ)., ಬೆಂಗಳೂರು

Facebook Comments