ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಗೆ ಕಡಿವಾಣ ಹಾಕಿ : ಎಚ್.ಕೆ.ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.12- ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಗಳಿಗೆ ಕಡಿವಾಣ ಹಾಕಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದರು. ವಿದ್ಯುತ್‍ದರ ಏರಿಕೆ ಬೆನ್ನಲ್ಲೇ ತೈಲ ಬೆಲೆಯೂ ಏರಿಕೆಯಾಗಿರುವುದರಿಂದ ಜನಸಾಮಾನ್ಯರಿಗೆ ತೀವ್ರ ಹೊರೆಯಾಗುತ್ತಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಇಲ್ಲವೆ ಸಮಾನಾಂತರವಾಗಿ ಸಹಾಯಧನವನ್ನಾದರೂ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಖಾತೆಗೆ ಎರಡು ಸಾವಿರ ಹಣ ನೀಡುತ್ತದೆ. ಮತ್ತೊಂದು ಕಡೆ ಪೆಟ್ರೋಲ್, ಡೀಸೆಲ್, ಅನಿಲ ಬೆಲೆ ಏರಿಸುವ ಮೂಲಕ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಪಡೆಯುವ ಪ್ರಯತ್ನ ಮಾಡುತ್ತಿದೆ. ತೈಲ ಬೆಲೆ ಏರಿಕೆ ಬೆನ್ನಲ್ಲೇ ಪರೋಕ್ಷವಾಗಿ ಇತರೆ ವಸ್ತುಗಳ ಬೆಲೆ ಏರಿಕೆಯಾಗುತ್ತದೆ.
ಕೋವಿಡ್ ಸಂದರ್ಭದಲ್ಲಿ ಸಾಮಾನ್ಯ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವುದು ಅವಶ್ಯಕ ಎಂದರು.

ಸಚಿವ ಸಂಪುಟ ವಿಸ್ತರಣೆ ಬಹುದಿನಗಳ ನಿರೀಕ್ಷೆಯಾಗಿದ್ದು, ನಾಳೆ ಮುಖ್ಯಮಂತ್ರಿ ತಮ್ಮ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ. ಬಹಳಷ್ಟು ಸಚಿವರು ಸಕ್ರಿಯವಾಗಿ ದಕ್ಷತೆಯಿಂದ ಕಾರ್ಯವನ್ನೇ ನಿರ್ವಹಿಸುತ್ತಿಲ್ಲ. ಕೋವಿಡ್‍ನಿಂದಾಗಿ ಆಡಳಿತ ಯಂತ್ರವೇ ಮಂದಗತಿಯಲ್ಲಿ ಸಾಗಿತ್ತು. ಸಂಪುಟ ವಿಸ್ತರಣೆ ನಂತರವಾದರೂ ಆಡಳಿತ ಯಂತ್ರಕ್ಕೆ ಚುರುಕು ನೀಡಬೇಕಿದೆ ಎಂದು ಅವರು ಸಲಹೆ ಮಾಡಿದರು.

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭದ ಬೆನ್ನಲ್ಲೇ ಪದವಿ ತರಗತಿಗಳನ್ನು ಜನವರಿ 15 ರಿಂದ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ತಲುಪಿದ್ದೇವೆ. ಮೂರ್ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದೆ. ಅಲ್ಲದೆ, ರೂಪಾಂತರ ಕೋವಿಡ್‍ನ ಆತಂಕ ಕೂಡ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿ ಪದವಿ ತರಗತಿಗಳನ್ನು ಆರಂಭಿಸುವ ಅಗತ್ಯವಿರಲಿಲ್ಲ. ಆದರೂ ಸರ್ಕಾರ ಪದವಿ ತರಗತಿಗಳನ್ನು ಪ್ರಾರಂಭ ಮಾಡುತ್ತಿದೆ. ಅದರ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು.

Facebook Comments