ಕೆಪಿಎಸ್‍ಸಿ ಲಿಕಾಸುರರಿಗೆ ಕಠಿಣ ಶಿಕ್ಷೆಯಾಗಲಿ : ಎಚ್.ಕೆ. ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಕರ್ನಾಟಕ ಲೋಕಸೇವಾ ಆಯೋಗದ ಎಫ್‍ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ತ್ವರಿತವಾಗಿ ತನಿಖೆಗೊಳಪಡಿಸಿ ಆರೋಪಿಗಳಿಗೆ ಶೀಘ್ರ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.  ಕೆಪಿಎಸ್‍ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿಂದೆಯೂ ಆಗಿದೆ. ಇಂತಹ ಪ್ರಕರಣಗಳಲ್ಲಿ ವಿಳಂಬವಾಗಬಾರದು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅಗತ್ಯಬಿದ್ದರೆ ಕಾನೂನಿಗೆ ತಿದ್ದುಪಡಿ ತಂದು ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು,ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯ ಅದರಲ್ಲಿ ಅಡಗಿರುತ್ತದೆ. ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಈಗಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಪ್ರಕರಣಗಳು ವಿಳಂಬವಾಗುತ್ತಿವೆ.  ಇನ್ನು ಮುಂದೆ ಯಾರೂ ಕೂಡ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಪ್ರಯತ್ನಕ್ಕೆ ಯತ್ನಿಸಬಾರದು. ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡಿದವರಿಗೂ ಶಿಕ್ಷೆಯಾಗಬೇಕು. ಆಗ ಮಾತ್ರ ಆರೋಪಿಗಳು ಎದುರುತ್ತಾರೆ ಎಂದರು.

ರಾಜ್ಯಾದ್ಯಂತ ಕ್ರಮವಾಗಲಿ:
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಸರ್ಕಾರ ಕ್ರಮ ಕೈಗೊಳ್ಳಬೇಕು. ಲೈಸೆನ್ಸ್ ಪಡೆಯದೆ ಗಣಿಗಾರಿಕೆ ಮಾಡಲು ಅವಕಾಶ ಮಾಡಿಕೊಡಬಾರದು. ಶಿವಮೊಗ್ಗ ಘಟನೆ ಹಿನ್ನೆಲೆಯಲ್ಲಿ ಕೆಲವೊಂದು ಕ್ರಮ ಕೈಗೊಂಡು ಸುಮ್ಮನಾದರೆ ಉಪಯೋಗವಿಲ್ಲ. ರಾಜ್ಯದ ಎಲ್ಲ ಕಡೆಗಳಲ್ಲೂ ಕಠಿಣ ಕ್ರಮವಾಗಬೇಕು. ಸ್ಫೋಟಕ ವಸ್ತು ಎಲ್ಲಿಂದ ಬಂತು? ಯಾರು ಮಾರಾಟ ಮಾಡಿದರು? ಸಾಗಾಣಿಕೆ ಹೇಗಾಯಿತು? ದಾಸ್ತಾನು ಮೊದಲಾದ ವಿಷಯಗಳ ಬಗ್ಗೆ ತನಿಖೆಯಾಗಬೇಕು.ಈ ಸ್ಪೋಟಕ ವಸ್ತು ಮಾರಾಟ ದಾಸ್ತಾನಿಗೂ ಪರವಾನಗಿ ಹೊಂದಿರಬೇಕು. ಈ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆ ಮುಂದೂಡಿಕೆ:
ಮುಖ್ಯಮಂತ್ರಿ ನಿವಾಸದ ಆವರಣದಲ್ಲಿ ಇಂದು ನಡೆಸಲು ಉದ್ದೇಶಿಸಿದ್ದ ಹಾಸನ ಜಿಲ್ಲಾ ಸಂಸದರು, ಶಾಸಕರ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಜಿಲ್ಲೆಗೆ ಮಂಜೂರಾಗಿದ್ದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು.

ಆದರೆ ನಿನ್ನೆ ಮುಖ್ಯಮಂತ್ರಿಯವರು ಗೌಡರೊಂದಿಗೆ ಮಾತುಕತೆ ನಡೆಸಿ ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳಿಗೆ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ. ಅಲ್ಲದೆ ಪ್ರತಿಭಟನೆ ಕೈಬಿಡುವಂತೆ ಮುಖ್ಯಮಂತ್ರಿಗಳು ಪತ್ರವನ್ನು ಬರೆದಿದ್ದರು. ಇದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಅನುಷ್ಠಾನ ಹಂತದಲ್ಲಿದ್ದರೂ ತಡೆಹಿಡಿಯಲಾಗಿತ್ತು. ಈ ಬಗ್ಗೆ ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Facebook Comments