ಜನರ ಆರೋಗ್ಯ ಕಾಪಾಡಲು ಸರ್ಕಾರದ ಕ್ರಮಗಳಿಗೆ ಸಹಕಾರ : ಹೆಚ್.ಕೆ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22-ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ಮತ್ತೆ ಎರಡು ವಾರ ವಿಸ್ತರಿಸಿರುವುದನ್ನು ಸ್ವಾಗತಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ಜನರ ಆರೋಗ್ಯ ಕಾಪಾಡಲು ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ. ಆದರೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು, ಸೋಂಕು ತಡೆಗಟ್ಟುವುದು ಸೇರಿದಂತೆ ಕೋವಿಡ್ ವಿಚಾರದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದರಿಂದ ರಾಜ್ಯಪಾಲರು ಮಧ್ಯೆಪ್ರವೇಶ ಮಾಡಬೇಕು. ಜನರ ಹಿತಕಾಪಡಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದರು‌.
ಸರ್ಕಾರ ಮೊಂಡುವಾದ ಮಾಡದೇ ವೈಫಲ್ಯ ಒಪ್ಪಿಕೊಳ್ಳಬೇಕು‌. ಇನ್ನಾದರೂ ವಾಸ್ತವ ಪರಿಸ್ಥಿತಿ ಅರಿತು ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಹಾಗೂ ಸೋಂಕು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಬ್ಲಾಕ್ ಪಂಗಸ್ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಕೋವಿಡ್ ಪಾಸಿಟೀನ್ ಪ್ರಮಾಣ ಕಡಿಮೆಯಾಗಿಲ್ಲ. ಸರ್ಕಾರವೇ ಕೋವಿಡ್ ಪರೀಕ್ಷೆ ಕಡಿಮೆ ಮಾಡಲು ನಿರ್ದೇಶನ ನೀಡಿದೆ. ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿದಿನ ಕೋವಿಡ್ ಪರೀಕ್ಷೆಗೆ ಮಿತಿ ವಿಧಿಸಲಾಗಿದೆ. ಪರೀಕ್ಷೆಯ ಮಿತಿ ದಾಟದಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಆರೋಪಿಸಿದರು.

ಪರೀಕ್ಷೆ ಕಡಿಮೆ ಮಾಡಿದ ಪರಿಣಾಮ ಹಳ್ಳಿಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚು ಹರಡಲು ಸರ್ಕಾರದ ಆಡಳಿತ ವೈಖರಿಯೇ ಪ್ರಮುಖ ಕಾರಣ ಎಂದು ಅವರು ಟೀಕಿಸಿದರು. ಸೋಂಕಿತರನ್ನು ತುರ್ತಾಗಿ ಪತ್ತೆ ಹಚ್ಚಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವ ಮೂಲಕ ಇತರರಿಗೆ ಸೋಂಕು ಹರಡುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಪ್ರಧಾನಿ ಅವರಿಗೆ ವಿಶ್ವಾವಿಲ್ಲ. ಹೀಗಾಗಿ ನೇರವಾಗಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿ ಕೋವಿಡ್ ನಿರ್ವಹಣೆ ಜವಾಬ್ದಾರಿ ನೀಡಿದ್ದಾರೆ ಎಂದು ಅವರು ಹೇಳಿದರು.

Facebook Comments