ರಾಜ್ಯಪಾಲರು ಸರ್ಕಾರದ ಕಿವಿ ಹಿಂಡಬೇಕು : ಹೆಚ್.ಕೆ.ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ‌ 4-ಕೋವಿಡ್ ಹರಡುವಿಕೆ ತಡೆಯಲು ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಲು ವಿಫಲವಾಗಿರುವ ರಾಜ್ಯ ಸರ್ಕಾರದ ಕಿವಿಯನ್ನು ರಾಜ್ಯಪಾಲರು ಹಿಂಡಬೇಕು ಎಂದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಅಸಹಾಯಕವಾಗಿ ಕೈ ಚೆಲ್ಲಿ ಕುಳಿತ್ತಿದೆ‌. ರಾಜ್ಯದಲ್ಲಿ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಆಗುತ್ತಿರುವ ತೊಂದರೆಗಳನ್ನು ರಾಜ್ಯಪಾಲರು ಗಮನಿಸಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿದರು.

ತಜ್ಞರ ಸಲಹೆ ಪ್ರಕಾರ ಕೋವಿಡ್ ಎರಡನೇ ಅಲೆ ಸಧ್ಯಕ್ಕೆ ನಿಲುವುದಿಲ್ಲ ಎಂಬ ಮಾಹಿತಿ ಇರುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಆಮ್ಲಜನಕ, ಔಷಧಿ ಸೇರಿದಂತೆ ಯಾವುದೇ ಸಮಸ್ಯೆ ಎದುರಾಗದಂತೆ ಸರ್ಕಾರ ಸನ್ನದ್ಧವಾಗಿರಬೇಕು. ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಈ ಸಂಜೆಗೆ ತಿಳಿಸಿದರು.

ಆಮ್ಮಜನಕ ಕೊರತೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ ಸು.24 ರೋಗಿಗಳು ಮೃತಪಟ್ಟ ಪ್ರಕರಣದ ನೇರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು ಹಾಗೂ ಮೃತಪಟ್ಟವರ ಕುಟುಂಬದವರಿಗೆ ತಲಾ ಹತ್ತು ಲಕ್ಷ ರೂ ಪರಿಹಾರ ನೀಡಬೇಕು ಆಗ್ರಹಿಸಿದರು.

ಕೋವಿಡ್ ಹರಡುವಿಕೆ ತಡೆಯುವಲ್ಲಿ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಚಾಮರಾಜನಗರ ಘಟನೆಗೆ ಆರೋಗ್ಯ ಸಚಿವರನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿಗಳು ಕೇವಲ ಎಚ್ಚರಿಕೆ ನೀಡಿದರೆ ಸಾಲದು, ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲವೇ ಸರ್ಕಾರವೇ ರಾಜೀನಾಮೆ ನೀಡಬೇಕು.ಚಾಮರಾಜನಗರದಲ್ಲಿ ಆದಂತಹ ಘಟನೆ ರಾಜ್ಯದ ಯಾವುದೇ ಭಾಗದಲ್ಲಿ ಮರುಕಳುಹಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ತಮ ಕೈಗೊಳ್ಳಬೇಕು. ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಹಾಸಿಗೆ, ವೆಂಟಿಲೇಟರ್, ಐಸಿಯುಗಳಿಗೆ ಗಣ್ಯರ ಶಿಫಾರಸ್ಸು ಮಾಡಿದರೂ ಸಿಗದಂತಾಗುತ್ತದೆ. ಬಡವ-ಶ್ರೀಮಂತರೆಂಬ ವ್ಯತ್ಯಾಸವಿಲ್ಲದೇ ಎಲ್ಲರಿಗೂ ಸೂಕ್ತ ಆರೋಗ್ಯ ಸೇವೆ ದೊರೆಯಬೇಕು ಎಂದು ಕುಮಾರಸ್ವಾಮಿ ತಿಳಿಸಿದರು.

Facebook Comments

Sri Raghav

Admin