ಆನಂದ್‍ಸಿಂಗ್‍ರನ್ನು ಸಚಿವ ಸ್ಥಾನದಿಂದ ಕೈ ಬಿಡದಿದ್ದರೆ ಅಧಿವೇಶನದಲ್ಲಿ ಧರಣಿ: ಎಚ್.ಕೆ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.15- ಆನಂದ್‍ಸಿಂಗ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡದಿದ್ದರೆ ಅಧಿವೇಶನದಲ್ಲಿ ಧರಣಿ ನಡೆಸುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಕೆ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್‍ಸಿಂಗ್ ಅವರಿಗೆ ಸಚಿವ ಸ್ಥಾನ ನೀಡಿದ್ದೇ ದೊಡ್ಡ ತಪ್ಪು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲೇ ಯೋಚಿಸಬೇಕಿತ್ತು.

ಕೂಡಲೇ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು. ಇಲ್ಲವೆ ಖಾತೆ ಬದಲಾವಣೆ ಮಾಡಬೇಕು ಎಂದು ಅವರು ಹೇಳಿದರು. ಅವರ ಮೇಲೆ ಸಾಕಷ್ಟು ಆರೋಪಗಳಿವೆ. ಗಣಿಗಾರಿಕೆಗೆ ಸಂಬಂಧಿಸಿದಂತೆ ಆರೋಪಗಳಿರುವ ಹಿನ್ನೆಲೆಯಲ್ಲಿ ಅರಣ್ಯ ಖಾತೆಯನ್ನು ಕೊಡುವುದು ಎಷ್ಟು ಸಮಂಜಸ. ಆರ್ಟಿಕಲ್-162, 163ರ ಪ್ರಕಾರ ರಾಜ್ಯಪಾಲರು ಆನಂದ್‍ಸಿಂಗ್ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕು.

ರಾಜ್ಯಪಾಲರು ರೂಲ್ ಆಫ್ ಲಾ ಎತ್ತಿ ಹಿಡಿಯಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಮಹತ್ವವಿರುವುದಿಲ್ಲ ಎಂದು ಹೇಳಿದರು.
ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅವರ ವಿರುದ್ಧವೇ ಧರಣಿ ಮಾಡಬೇಕಾಗುತ್ತದೆ ಎಂದು ಪಾಟೀಲ್ ಹೇಳಿದರು.

Facebook Comments