ಉಪಕರಣಗಳ ಖರೀದಿ ಅವ್ಯವಹಾರದ ಬಗ್ಗೆ ತನಿಖೆಗೆ ಎಚ್.ಕೆ ಪಾಟೀಲ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30- ಕರ್ನಾಟಕ ಡ್ರಗ್ಸ ಲಾಜಿಸ್ಟಿಕ್ಸ ಸಂಸ್ಥೆಯಲ್ಲಿ ಕೊರೋನಾ ವೈರಸ್ ಸಂಬಂಧ ಔಷಧ ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಭ್ರಷ್ಠಾಚಾರದ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕೋವಿಡï-19 ನಿರ್ವಹಣೆಯ ಕಡತಗಳನ್ನು ಹಾಗೂ ಕಾಗದಗಳನ್ನು ಸುರಕ್ಷತಾ ಸುಪರ್ದಿಗೆ ಒಪ್ಪಿಸಿ ಹಿರಿಯ ಅಧಿಕಾರಿಯೊಬ್ಬರ ನೇರ ಮೇಲ್ವಿಚಾರಣೆಯಲ್ಲಿರಿಸಬೇಕು ಎಂದು ಮಾಜಿ ಸಚಿವ ಹಾಗೂ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಎಚ್.ಕೆ ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಟಿ.ಎಂ.ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿರುವ ಎಚ್.ಕೆ.ಪಾಟೀಲ್ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಾಕಷ್ಟು ದೂರುಗಳು ಸ್ವೀಕೃತವಾಗಿವೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಕಲಂ 4 ರನ್ವಯ ನೀಡಿರುವ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡು ಸಂಸ್ಥೆಯ ಅಧಿಕಾರಿಗಳು ಹತ್ತಾರು ಕೋಟಿ ರೂ.ಗಳ ಅವ್ಯವಹಾರ ನಡೆಸಿದ್ದು, ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುತ್ತಾರೆ ಎಂಬ ಗಂಭೀರ ಸ್ವರೂಪದ ಆರೋಪವನ್ನು ದಾಖಲೆಗಳ ಸಮೇತ ಸಮಿತಿಗೆ ಸಲ್ಲಿಸಲಾಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಜವಾಬ್ದಾರಿಯುತ ಸಮಿತಿಯಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ಕೈಗೊಳ್ಳಲು ನಿರ್ಣಯಿಸಿತ್ತು. ಆದರೆ, ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಮಂಡಲ ಅಥವಾ ವಿಧಾನಸಭೆಯ ಸಮಿತಿಗಳು ಮುಂದಿನ ಆದೇಶದವರೆಗೂ ರಾಜ್ಯದೊಳಗೆ ಅಥವಾ ಹೊರ ರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿಯೂ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಕೈಗೊಳ್ಳಬಾರದೆಂದು ಸಭಾಧ್ಯಕ್ಷರು ಆದೇಶಿಸಿರುತ್ತಾರೆ ಎಂದು ತಿಳಿಸಲಾಗಿದೆ.

ಹೀಗಾಗಿ ಮೇ 28ರಂದು ಸಭಾಧ್ಯಕ್ಷರ ಆದೇಶದಂತೆ ಸಭೆಯನ್ನು ನಡೆಸಿ ತಮ್ಮ ಸಮಿತಿಯ ಭೇಟಿ,ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ಮುಂತಾದವುಗಳನ್ನು ಮುಂದೂಡಿದೆ. ಜೂನ್ 2ರಂದು ಮತ್ತೆ ಸಮಿತಿ ಸಭೆ ಸೇರಿ ತನ್ನ ನಿರ್ಣಯಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಆದರೆ ಸರ್ಕಾರ ಕೋವಿಡ-19ರ ನಿರ್ವಹಣೆ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾದ ಮೂಲಭೂತ ತತ್ವವನ್ನೇ ಗಾಳಿಗೆ ತೂರಿ ದೊಡ್ಡದೊಡ್ಡ ಪ್ರಮಾದಗಳನ್ನು ಎಸಗುತ್ತಿರುವ ಅನೇಕ ಉದಾಹರಣೆಗಳು ಗಮನಕ್ಕೆ ಬರುತ್ತಿರುವುದರಿಂದ ಈ ವಿಷಯಗಳಿಗೆ ಸಂಬಂಧಪಟ್ಟ ಎಲ್ಲಾ ಕಡತಗಳು ಮತ್ತು ಕಾಗದಗಳ ಸುರಕ್ಷತತೆಯ ಬಗ್ಗೆ ಬಹುದೊಡ್ಡ ಆತಂಕ ಎದುರಾಗಿದೆ. ಈ ಕಡತಗಳನ್ನು ಕಾಗದಗಳನ್ನು ಸಂರಕ್ಷಿಸಬೇಕಾದದ್ದು ರಾಜ್ಯ ಸರ್ಕಾರದ ಹೊಣೆಗಾರಿಕೆ ಎಂದು ಅವರು ಹೇಳಿದ್ದಾರೆ.

ವಿಶ್ವದಾದ್ಯಂತ ಮಹಾಮಾರಿ ಕೋವಿಡ-19ರಿಂದ ಅತ್ಯಂತ ಗಂಭೀರ, ಕಳವಳಕಾರಿ ಹಾಗೂ ಆತಂಕದ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೊಣೆಗಾರಿಕೆಯನ್ನು ಮತ್ತು ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಈ ಜವಾಬ್ದಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸರ್ಕಾರ ಪಾರದರ್ಶಕ, ಭ್ರಷ್ಠಾಚಾರ ಮತ್ತು ಸಮಯೋಚಿತ ಜನಪರ ನಿರ್ಧಾರಗಳನ್ನು ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾಗಿರುವುದು ಇಂದಿನ ಅವಶ್ಯಕತೆ.

ಗಂಭೀರ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭದಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಿ ಹಲವಾರು ಪತ್ರಗಳನ್ನು ನಾನು ಸರ್ಕಾರಕ್ಕೆ ಈ ಹಿಂದೆಯೇ ಬರೆದಿದ್ದ. ಅನೇಕ ಸಲಹೆಗಳನ್ನು ಸಹ ಮಾಡಿದ್ದಾ ಎಂದಿದ್ದಾರೆ.

Facebook Comments