ಕೊರೋನಾ ಪೀಡಿತರಿಗೆ 2 ರಿಂದ 5 ಲಕ್ಷ ರೂ. ವಿಮೆ ಮಾಡುವಂತೆ ಸರ್ಕಾರಕ್ಕೆ ಹೆಚ್.ಕೆ.ಪಾಟೀಲ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.4- ರಾಜ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆಯಬೇಕು, ರಾಜ್ಯದ ಎಲ್ಲಾ ಜನರಿಗೆ ಕೋವಿಡ್ ವಿಮೆ ಮಾಡಿಸಬೇಕು, ಆರೋಗ್ಯ ಸೇವೆಗೆ ಅಗತ್ಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ತುರ್ತು ಹಾಗೂ ವಿಶೇಷ ನೇಮಕಾತಿ ಮೂಲಕ ನೇಮಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ಕೊರೊನಾಪಾಸಿಟಿವ್ ಬಂದವರಿಗೆ 2 ರಿಂದ 5 ಲಕ್ಷ ರೂ ಆರ್ಥಿಕ ಸಹಾಯ ಸಿಗುವಂತಹ ವಿಮೆಯನ್ನು ರಾಜ್ಯ ಸರ್ಕಾರವೇ ಮಾಡಿಕೊಡಬೇಕು. ರಾಜ್ಯದ ಎಲ್ಲಾ ಜನರನ್ನು ವಿಮೆ ವ್ಯಾಪ್ತಿಗೆ ತರಬೇಕು. ಇದಕ್ಕಾಗಿ ಹೆಚ್ಚೆಂದರೆ 2 ಸಾವಿರ ಕೋಟಿ ಹಣ ಖರ್ಚಾಗಲಿದೆ. ಆದರೆ ಜನರಿಗೆ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ ಎಂದು ಹೇಳಿದರು.

ಇಟಲಿ ಪರಿಸ್ಥಿತಿ ಬರುವ ಮುನ್ನವೇ ಸಭೆ ಕರೆದು ಪ್ರತಿಪಕ್ಷಗಳ ಸಲಹೆಗಳನ್ನು ಪಡೆಯಬೇಕು. ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಸಲಹೆ ನೀಡಿದೆ. ಆ ಸಲಹೆಗಳನ್ನ ಪಾಲಿಸಬೇಕು ಎಂದು ಒತ್ತಾಯಿಸಿದರು. ಕೋವಿಡ್ 19 ಕರ್ನಾಟಕವನ್ನು ಸಂಪೂರ್ಣವಾಗಿ ತಲ್ಲಣಗೊಳಿಸಿದೆ. ರಾಜ್ಯ ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ.

ಯುದ್ಧೋಪಾದಿಯಲ್ಲಿ ಕೆಲಸ ಆಗಬೇಕಿತ್ತು. ಅದರೆ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕೊರೊನಾ ಟೆಸ್ಟ್‍ಗಳನ್ನು ಹೆಚ್ಚು ಮಾಡುವಂತೆ ಮನವಿ ಮಾಡಿದ್ದೆವು. ವಿಧಾನ ಸಭೆ ಒಳಗೆ ಮತ್ತು ಹೊರಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ.

ಪ್ರಸ್ತುತ 40 ಸಾವಿರ ಸ್ಯಾಂಪಲ್‍ಗಳು ಪರೀಕ್ಷೆಗಾಗಿ ಬಾಕಿ ಇವೆ. ಸರ್ಕಾರ ಬೌದ್ಧಿಕವಾಗಿ ದಿವಾಳಿಯಾಗಿದೆ. ಆಸ್ಪತ್ರೆಗಳಲ್ಲಿ ಟೆಕ್ನಿಷಿಯನ್, ವೈದ್ಯರು, ನರ್ಸ್‍ಗಳು, ವೈದ್ಯರ, ಸಫಾಯಿ ಕರ್ಮಚಾರಿಗಳ ಕೊರತೆಯಾಗಿದೆ. ಕೂಡಲೇ ವಿಶೇಷ ಮತ್ತು ತುರ್ತು ನೇಮಕಾತಿ ಮೂಲಕ ನೇಮಿಸಿಕೊಳ್ಳುವಂತೆ ಒತ್ತಾಯಿಸಿದರು.

ಕೋವಿಡ್ ಚಿಕಿತ್ಸೆಗೆ ತ್ರೀ ಸ್ಟಾರ್ ಮತ್ತು ಫೈವ್ ಸ್ಟಾರ್ ಹೋಟೆಲ್‍ಗಳನ್ನು ಪಡೆದು ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಿ ಎಂದು ಮೊದಲಿಂದಲೂ ಹೇಳುತ್ತಿದ್ದೇವೆ. ಆದರೆ ಸರ್ಕಾರ ಕೇಳಲಿಲ್ಲ. ಇವತ್ತು ಚಿಕಿತ್ಸೆ ಸಿಗದೇ ಸೋಂಕಿತರು ರಸ್ತೆಯಲ್ಲಿ ಸಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ವಿಷಾದಿಸಿದರು.

ಜನ ರಸ್ತೆಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಕೂಡಲೆ ರಾಜ್ಯ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶ ಮಾಡಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.ಸರ್ಕಾರ ಈಗಲೂ ಎಚ್ಚೇತ್ತುಕೊಳ್ಳದಿದ್ದೆ ಜನಾಕ್ರೋಶ ಹೆಚ್ಚಾಗಲಿದೆ. ಜನರೇ ಬಾರುಕೋಲು ಹಿಡಿದು ಬರುತ್ತಾರೆ ಎಂದ ಅವರು, ಆಹಾರ ಇಲಾಖೆ ಟೆಂಡರ್‍ನಲ್ಲಿ ಅವ್ಯವಹಾರ ನಡೆದಿದೆ.

ಆಸ್ಪತ್ರೆಗಳಿಗೆ ಕಳಪೆ ಸ್ಯಾನಿಟೈಸರ್ ಪೂರೈಕೆ ಮಾಡಲಾಗಿದೆ. ಹಲವು ಆಸ್ಪತ್ರೆಗಳು ಕಳಪೆಯಾಗಿದೆ ಎಂದು ಸ್ಯಾನಿಟೈಸರ್‍ನ್ನು ವಾಪಸ್ ನೀಡಿವೆ ಎಂದು ಆರೋಪಿಸಿದರು. ಸರ್ಕಾರ ಭ್ರಷ್ಟರಿಗೆ ಸರಿಯಾದ ಎಚ್ಚರಿಕೆ ಕೊಡಬೇಕು. ಭ್ರಷ್ಟಾಚಾರ ಮುಚ್ಚಿಹಾಕುವ ಪ್ರಯತ್ನ ಮಾಡಬಾರದು. ಆ್ಯಂಬುಲೆನ್ಸ್ ಖರೀದಿಗೆ ಯಾವ ತೊಂದರೆಯೂ ಇಲ್ಲ. ಆದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ.

ಬೆಂಗಳೂರಿನ ಪ್ರತಿ ವಾರ್ಡ್‍ಗೆ ಎರಡು ಆ್ಯಂಬುಲೆನ್ಸ್ ಕೊಡುತ್ತೇವೆ ಎಂದು ಸಚಿವರು ಹೇಳುತ್ತಿದ್ದಾರೆ. ಸಾವಿನ ಸಂಖ್ಯೆ ವಿಪರೀತ ಹೆಚ್ಚಾಗುತ್ತಿದೆ. ಅಂತ್ಯಕ್ರಿಯೆ ಮಾಡೋಕೂ ಕಷ್ಟವಾಗುತ್ತಿದೆ. ಈಗಲಾದರೂ ಮುತುವರ್ಜಿ ವಹಿಸಿ ಸರ್ಕಾರ ಏನಾದರೂ ಮಾಡಲಿದೇಯೇ ಎಂದು ಪ್ರಶ್ನಿಸಿದರು.

ದೊಡ್ಡ ಸಂಖ್ಯೆಯಲ್ಲಿ ಜನ ಸಾವಿಗೀಡಾಗುತ್ತಿದ್ದಾರೆ. ಪರಿಹಾರದ ಮಾತು ದೂರ, ಮೊದಲು ಜೀವ ಉಳಿಸಲು ಆಧ್ಯತೆ ನೀಡಿ. ನಾಲ್ಕು ಕಿಟ್ ಹಂಚಿದರೆ ಸಾಲದು. ಕಾರ್ಮಿಕರ ಬದುಕನ್ನು ಬೀದಿಗೆ ತಂದರು, ಮುಂದೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಲಿದೆ ಎಂದು ಎಚ್ಚರಿಸಿದರು. ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಅಂತ ಹೇಳುತ್ತಿದ್ದಾರೆ. ಮನೆಯಲ್ಲೇ ಕ್ವಾರಂಟೈನ್ ಇರಿ ಎನ್ನುತ್ತಿದ್ದಾರೆ. ಜನ ಬೀದಿ ಬೀದಿಗಳಲ್ಲಿ ಸಾಯುವ ಪರಿಸ್ಥಿತಿ ಎದುರಾಗಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.

Facebook Comments