ಖರ್ಗೆ ಹೆಸರು ಪ್ರಸ್ತಾಪಿಸಿದ ಶೆಟ್ಟರ್ : ಎಚ್.ಕೆ.ಪಾಟೀಲ್ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21-ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮನಸ್ಸು ಮಾಡಿದರೆ ಮಹದಾಯಿ ನದಿ ವಿವಾದವನ್ನು ಕ್ಷಣಮಾತ್ರದಲ್ಲಿ ಬಗೆಹರಿಸಬಹುದು ಎಂದು ಸಚಿವ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಧೀಕರಣ ಈಗಾಗಲೇ ತೀರ್ಪು ನೀಡಿದೆ. ಅದಕ್ಕೆ ಅಧಿಸೂಚನೆ ಹೊರಡಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಕಾಮಗಾರಿ ಆರಂಭಿಸಬಹುದು. ಆದರೆ ಅದನ್ನು ಬಿಟ್ಟು ಜಗದೀಶ್ ಶೆಟ್ಟರ್ ಅವರು ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹದಾಯಿ ಹೋರಾಟಗಾರರು ಹುಬ್ಭಳ್ಳಿ, ಧಾರವಾಡ, ಗದಗದಿಂದ ಬೆಂಗಳೂರಿಗೆ ಬಂದು ರಾಜ್ಯಪಾಲರನ್ನು ಭೇಟಿ ಮಾಡಲು ಯತ್ನಿಸಿದರು. ಮೂರು ದಿನ ಬೆಂಗಳೂರಿನಲ್ಲಿ ಹಗಲು-ರಾತ್ರಿ ಹೋರಾಟ ಮಾಡಿದವರನ್ನು ಆ ಭಾಗದ ನಾಯಕರಾಗಿ ಭೇಟಿ ಮಾಡಿ ಸಮಸ್ಯೆ ಆಲಿಸುವಂತಹ ಕರ್ತವ್ಯವನ್ನು ಜಗದೀಶ್‍ಶೆಟ್ಟರ್ ಪಾಲಿಸಲಿಲ್ಲ. ಈ ರೀತಿಯ ಉಡಾಫೆ ನಡವಳಿಕೆಗಳನ್ನು ಜನ ಕ್ಷಮಿಸುವುದಿಲ್ಲ ಎಂದರು.

Facebook Comments