ಸಿದ್ದರಾಮಯ್ಯಗೆ ಎಚ್.ಕೆ.ಪಾಟೀಲ್ ಟಾಂಗ್, ಸಿಎಲ್‍ಪಿ-ವಿಪಕ್ಷ ನಾಯಕ ಸ್ಥಾನ ಬೇರ್ಪಡಿಸಲು ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಶಾಸಕಾಂಗ ಪಕ್ಷದ ಹಾಗೂ ವಿರೋಧ ಪಕ್ಷದ ನಾಯಕ ಈ ಎರಡೂ ಸ್ಥಾನಗಳನ್ನು ಪ್ರತ್ಯೇಕಗೊಳಿಸಬೇಕೆಂದು ಹೇಳುವ ಮೂಲಕ ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಯುಪಿಎ ಅವಧಿಯಿಂದಲೂ ಸಂಸತ್‍ನಲ್ಲಿ ವಿಪಕ್ಷ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿವೆ. ಮಹಾರಾಷ್ಟ್ರದಲ್ಲಿ ಇದೇ ರೀತಿ ಎರಡು ಹುದ್ದೆಗಳನ್ನು ಬೇರ್ಪಡಿಸಲಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಈ ಎರಡು ಹುದ್ದೆಗಳು ಬೇರೆ ಬೇರೆಯಾಗಿದ್ದವು. ಹಾಗಾಗಿ ಮುಂದಿನ ದಿನಗಳಲ್ಲೂ ಇದೇ ಪದ್ಧತಿ ಮುಂದುವರೆಯಬೇಕು. ದೇಶಾದ್ಯಂತ ಒಂದೇ ಮಾದರಿ ಇರಬೇಕೆಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಪರಮೇಶ್ವರ್ ಈ ಬಗ್ಗೆ ಬಹಿರಂಗವಾಗಿ ಹೇಳಿದ್ದರು. ಇದಕ್ಕೆ ಎಚ್.ಕೆ.ಪಾಟೀಲ್ ದನಿಗೂಡಿಸಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಎರಡು ಹುದ್ದೆಗಳನ್ನು ಬೇರ್ಪಡಿಸಬಾರದು ಎಂದು ತಾವು ಸೋನಿಯಾಗಾಂಧಿ ಅವರ ಬಳಿ ಹೇಳಿರುವುದಾಗಿ ಇತ್ತೀಚೆಗೆ ಸ್ಪಷ್ಟಪಡಿಸಿದ್ದರು.

ನಾಲ್ಕು ಕಾರ್ಯಾಧ್ಯಕ್ಷರ ನೇಮಕಕ್ಕೂ ಎಚ್.ಕೆ.ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಈಗಿರುವ ಕಾರ್ಯಾಧ್ಯಕ್ಷರ ಸ್ಥಾನ ಸಾಕು. ನಾಲ್ಕು ಮಂದಿ ಕಾರ್ಯಾಧ್ಯಕ್ಷರ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಾಲ್ಕು ಮಂದಿ ಕಾರ್ಯಾಧ್ಯಕ್ಷರ ನೇಮಕಾತಿ ಸಿದ್ದರಾಮಯ್ಯ ಅವರ ಪ್ರಸ್ತಾವವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ನೇಮಕಾತಿ ಮಾಡಬೇಕು. ಅನಗತ್ಯ ವಿಳಂಬ ಸರಿಯಲ್ಲ. ಮುಂದಿನ ದಿನಗಳಲ್ಲಿ ಜಿಪಂ, ಗ್ರಾಪಂ ಚುನಾವಣೆಗಳು ಎದುರಾಗುತ್ತಿವೆ. ಪಕ್ಷ ಸಂಘಟನೆಯನ್ನು ಬಲಗೊಳಿಸಬೇಕು. ಹಾಗಾಗಿ ಹೈಕಮಾಂಡ್ ವಿಳಂಬ ಮಾಡದೆ ಶೀಘ್ರವೇ ಅಧ್ಯಕ್ಷರನ್ನು ಘೋಷಣೆ ಮಾಡಬೇಕೆಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

Facebook Comments