ವಿಧಾನಸೌಧ-ವಿಕಾಸಸೌಧಕ್ಕೆ ಅರ್ಧ ದಿನ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.16- ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ಸಂಜೆ ವಿಧಾನಸೌಧದಲ್ಲಿ ನಡೆಯಲಿರುವ ಗೃಹ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಅರ್ಧದಿನ ರಜೆಯನ್ನು ರಾಜ್ಯಸರ್ಕಾರ ನೀಡಿದೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ತಮ್ಮ ಕಚೇರಿಗಳಿಂದ ಇಂದು ಮಧ್ಯಾಹ್ನ 1.30ರ ನಂತರ ತೆರಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚನೆ ನೀಡಿತ್ತು.

ಗೃಹ ಇಲಾಖೆ ವತಿಯಿಂದ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ವಾಹನಗಳಿಗೆ ಚಾಲನೆ ನೀಡುವ, ಪೊಲೀಸ್ ಗೃಹ-2020ರಡಿ ನಿರ್ಮಿಸಿರುವ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ (ವಚ್ರ್ಯುವಲ್), ಪೊಲೀಸ್ ಗೃಹ-2025ರ ಉದ್ಘಾಟನೆ (ವಚ್ರ್ಯುವಲ್), ವಿಜಯಪುರ-ಇಂಡಿಯ ರಿಜರ್ವ್ ಬೆಟಾಲಿಯನ್ ಉದ್ಘಾಟನೆ (ವಚ್ರ್ಯುವಲ್) ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರು ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಮಧ್ಯಾಹ್ನದ ನಂತರ ಅರ್ಧದಿನ ರಜೆ ನೀಡಲಾಗಿದೆ.

ಅಲ್ಲದೆ, ವಿಕಾಸಸೌಧ ಮತ್ತು ವಿಧಾನಸೌಧಗಳೆರಡಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ವಿಧಾನಸೌಧ ಪ್ರವೇಶಿಸುವ ನಾಲ್ಕು ದ್ವಾರಗಳಲ್ಲೂ ಪೊಲೀಸ್ ಬಿಗಿಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೆ, ಮಧ್ಯಾಹ್ನ 3 ಗಂಟೆನಂತರ ವಿಧಾನಸೌಧದ ಮುಂಭಾಗವಿರುವ ಅಂಬೇಡ್ಕರ್ ವೀದಿಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕೆಆರ್ ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೂ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

Facebook Comments