70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.8- ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ 70ನೆ ಹುಟ್ಟುಹಬ್ಬದ ಅಂಗವಾಗಿ ಅವರ ಅಪಾರ ಅಭಿಮಾನಿಗಳು , ಆತ್ಮೀಯರು ಕಾರ್ಯಕರ್ತರು ಹೂಗುಚ್ಛ ನೀಡಿ ಅಭಿನಂದಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ ವಿರೋಧ ಪಕ್ಷದ ಉಪ ನಾಯಕನ ಸ್ಥಾನ ಅಥವಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ನನಗೆ ಹುದ್ದೆಗಿಂತ ಪಕ್ಷದ ಜವಾಬ್ದಾರಿ ಮುಖ್ಯ ಎಂದು ತಿಳಿಸಿದರು.

ಸಮ ಬಾಳು, ಸಮ ಪಾಲು ಎಂಬ ಸಿದ್ಧಾಂತದ ಮೇಲೆ ನಂಬಿಕೆಯುಳ್ಳ ತಾವು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿರ್ವಹಿಸುವುದಾಗಿ ಹೇಳಿದರು.ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಕಾರ್ಯ ನಿರ್ವಹಿಸಲು ಇಚ್ಛಿಸಿದ್ದು , ಇಂದಿರಾಗಾಂಧಿ ಹಾಗೂ ದೇವರಾಜ ಅರಸು ಅವರೇ ನಮಗೆ ಆದರ್ಶ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಆತ್ಮ ತೃಪ್ತಿಯಿಂದ ನಿರ್ವಹಿಸುವ ಜತೆಗೆ ಹಿರಿಯರ ಆಶೀರ್ವಾದ ಹಾಗೂ ಕಿರಿಯರ ಸಹಕಾರದೊಂದಿಗೆ ಪಕ್ಷ ಸಂಘಟನೆಗೆ ಮುಂದಾಗುವುದಾಗಿ ಹೇಳಿದರು.

ಚುನಾವಣೆ ಪೂರ್ವದಲ್ಲೇ ಜೆಡಿಎಸ್, ಬಿಜೆಪಿ ಹೊಂದಾಣಿಕೆ ವಿಷಯ ಕೇಳಿ ಬಂದಿತ್ತು. ಈಗ ಎರಡೂ ಪಕ್ಷಗಳ ನಡೆ-ನುಡಿ ಗಮನಿಸಿದರೆ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಗೊತ್ತಿಲ್ಲ. ವಿರೋಧ ಪಕ್ಷ ಆಡಳಿತ ಪಕ್ಷದ ನ್ಯೂನ್ಯತೆಯನ್ನು ಮುಂದಿಡಬೇಕು ಎಂದ ಅವರು, ಜೆಡಿಎಸ್ ಬಿಜೆಪಿಯೊಂದಿಗೆ ಹೋದರೆ ನಮಗೇನೂ ಅಭ್ಯಂತರವಿಲ್ಲ. ಅದು ಜೆಡಿಎಸ್‍ನ ಆಂತರಿಕ ವಿಚಾರ. ರಾಜಕೀಯ ನಿಂತ ನೀರಲ್ಲ. ಕಾಲ ಕಾಲಕ್ಕೆ ರಾಜಕೀಯ ಧೃವೀಕರಣ ನಡೆಯುತ್ತಿರುತ್ತದೆ ಎಂದು ವ್ಯಾಖ್ಯಾನಿಸಿದರು.

ಕಾಂಗ್ರೆಸ್ ಬಂದರೆ ದಲಿತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಅಧಿಕಾರಕ್ಕೆ ಬಂದಂತೆ ಚುನಾವಣೆ ಸಮಯದಲ್ಲಿನ ಘಟನೆಗಳು ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ. ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಎಂದರು. ಬಿಜೆಪಿ ಮತ್ತು ಜೆಡಿಎಸ್ ಸಿದ್ದರಾಮಯ್ಯ ಅವರನ್ನು ಕೇಂದ್ರೀಕರಿಸಿ ಟೀಕೆ ಮಾಡುತ್ತಿದೆ. ಇದು ಅವರ ನಾಯಕತ್ವ ಹಾಗೂ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಹೇಳಿದರು.

ತಮ್ಮ 70ನೆ ವರ್ಷದ ಹುಟ್ಟುಹಬ್ಬದ ನಿಮಿತ್ತ ಕಾರ್ಯಕರ್ತರು , ಅಭಿಮಾನಿಗಳು ಅಭಿನಂದನಾ ಗ್ರಂಥ ಹಾಗೂ ಕಿರುಚಿತ್ರವನ್ನು ಹೊರ ತರಲು ಮುಂದಾಗಿದ್ದಾರೆ. ಡಿಸೆಂಬರ್ ಎರಡು ಅಥವಾ ಮೂರನೆ ವಾರದಲ್ಲಿ ಬಿಡುಗಡೆಗೊಳ್ಳಲಿದೆ. ಇಂತಹ ಹೆಜ್ಜೆಗಳಿಂದ ತಮಗೆ ಹೆಮ್ಮೆಯಾಗುವ ಜತೆಗೆ ಜವಾಬ್ದಾರಿ ಕೂಡ ಹೆಚ್ಚಿದೆ ಎಂದು ತಿಳಿಸಿದರು.

Facebook Comments