ಎಚ್‍ಎಂಟಿಗೆ ಭಾವಪೂರ್ಣ ವಿದಾಯ, 109.32 ಭೂಮಿ ಅಧಿಕೃತವಾಗಿ ಇಸ್ರೋಗೆ ಹಸ್ತಾಂತರ

ಈ ಸುದ್ದಿಯನ್ನು ಶೇರ್ ಮಾಡಿ

HMT--01
ತುಮಕೂರು, ಜು.14- ಕೋಟ್ಯಂತರ ವಾಚ್‍ಗಳನ್ನು ತಯಾರಿಸಿ ದೇಶದಲ್ಲೇ ಮನೆ ಮಾತಾಗಿದ್ದ ಎಚ್‍ಎಂಟಿ ಇತಿಹಾಸ ಪುಟ ಸೇರಲಿದ್ದು , ಅಧಿಕೃತವಾಗಿ ಎಚ್‍ಎಂಟಿ ಜಾಗವನ್ನು ಇಸ್ರೋ ಸಂಸ್ಥೆಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಸ್ತಾಂತರಿಸಿದರು. ಜಿಲ್ಲೆಯ ಪ್ರಮುಖ ಕೈಗಾರಿಕೆಗಳಲ್ಲೊಂದಾದ ಹಿಂದೂ ಮೆಷಿನ್ ಟೂಲ್ಸ್ (ಎಚ್‍ಎಂಟಿ) ಕೈ ಗಡಿಯಾರ ಕಂಪೆನಿಯ ತುಮಕೂರು ಘಟಕದ ಒಡೆತನದಲ್ಲಿದ್ದ 109.32 ಎಕರೆ ಭೂಮಿ ಇಂದು ಅಧಿಕೃತವಾಗಿ ಇಸ್ರೋಗೆ ಹಸ್ತಾಂತರಿಸಲಾಗಿದೆ.ಎರಡು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಎಚ್‍ಎಂಟಿ ಕಾರ್ಖಾನೆಗೆ ಬೀಗ ಜಡಿದಿದ್ದರಿಂದ ಜಾಗ ಪಾಳು ಬಿದ್ದಿತ್ತು.ಈ ಜಾಗವನ್ನು ಹೇಗಾದರೂ ಮಾಡಿ ಕಬಳಿಸಬೇಕೆಂದು ಕೆಲ ಖಾಸಗಿ ಕಂಪೆನಿಗಳು ಕಣ್ಣು ಹಾಕಿದ್ದರು. ಆದರೆ ಸಂಸದ ಮುದ್ದಹನುಮೇಗೌಡ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಭೂಮಿ ಖಾಸಗಿಯವರ ಪಾಲಾಗದೆ ಪ್ರತಿಷ್ಠಿತ ಇಸ್ರೋಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಬೇಕೆಂಬ ಉದ್ದೇಶದಲ್ಲಿ 1978ರಲ್ಲಿ ಅಂದಿನ ಸಂಸದ ಕೆ.ಲಕ್ಕಪ್ಪ ಅವರು ಎಚ್‍ಎಂಟಿ ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದ್ದರು. ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದರು. ಈ ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿದ್ದ ಬ್ರಾಂಡ್‍ಗಳಾದ ಸಂಗಂ , ಉತ್ಸವ್, ಎಲಿಗೇನ್ಸ್, ಪೈಲೆಟ್ ಮುಂತಾದ ಕೈ ಗಡಿಯಾರಗಳು ಜನಪ್ರಿಯವಾಗಿದ್ದವು.

ಸುಮಾರು 4 ಕೋಟಿ ವಾಚ್‍ಗಳನ್ನು ತಯಾರಿಸಿದ ಕೀರ್ತಿ ತುಮಕೂರು ಘಟಕಕ್ಕೆ ಇದೆ. ಕಾರಣಾಂತರಗಳಿಂದ ಕಾರ್ಖಾನೆಯು 2016ರಲ್ಲಿ ಬಂದ್ ಮಾಡಲಾಯಿತು. ಸುಮಾರು 2 ವರ್ಷಗಳಿಂದ ಪಾಳು ಬಿದ್ದಿದ್ದ ಎಚ್‍ಎಂಟಿ ಜಾಗವನ್ನು ಇಸ್ರೋಗೆ ಹಸ್ತಾಂತರಿಸುವುದರಿಂದ ಜಿಲ್ಲೆಗೆ ಮತ್ತೆ ಕಳೆ ಬಂದಿದೆ.
ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ಎಚ್‍ಎಂಟಿಗೆ ಭಾವಪೂರ್ಣ ವಿದಾಯ ಇಸ್ರೋಗೆ ಹೃದಯ ಸ್ಪರ್ಶಿ ಸ್ವಾಗತ ಕಾರ್ಯಕ್ರಮದಲ್ಲಿ ಸಂಸದರಾದ ಚಂದ್ರಪ್ಪ , ಮುದ್ದಹನುಮೇಗೌಡ, ಸಚಿವರಾದ ವೆಂಕಟರಮಣಪ್ಪ , ಶ್ರೀನಿವಾಸ್, ಶಾಸಕ ಜ್ಯೋತಿ ಗಣೇಶ್, ಮಾಜಿ ಶಾಸಕ ಕೆ.ಎನ್.ರಾಜಣ್ಣ, ರಫೀಕ್ ಅಹಮದ್, ಇಸ್ರೋದ ವ್ಯವಸ್ಥಾಪಕ ಎನ್.ಕುಮಾರಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಪರಮೇಶ್ವರ್ ಹೇಳಿದ್ದೇನು..?

ತುಮಕೂರು, ಜು.14-ಜಿಲ್ಲೆಗೆ ದೊಡ್ಡ ದೊಡ್ಡ ಕೈಗಾರಿಕೆಗಳು ಪಾದಾರ್ಪಣೆ ಮಾಡುತ್ತಿದ್ದು, ಇದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು. ಎಚ್‍ಎಂಟಿಗೆ ಭಾವಪೂರ್ಣ ವಿದಾಯ, ಇಸ್ರೋಗೆ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 1978ರಲ್ಲಿ ಸಂಸದರಾಗಿದ್ದ ಲಕ್ಕಪ್ಪನವರು ಜಿಲ್ಲೆಗೆ ಎಚ್‍ಎಂಟಿ ಕಾರ್ಖಾನೆ ತರಲು ಬಹಳ ಶ್ರಮಿಸಿದ್ದರು. ಅವರ ಸ್ನೇಹ ಶ್ಲಾಘನೀಯ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಸಿಕ್ಕಿತ್ತು. ಆದರೆ ಕಾರಣಾಂತರಗಳಿಂದ ಕಳೆದ 2 ವರ್ಷಗಳಿಂದ ಕಾರ್ಖಾನೆಯನ್ನು ಬಂದ್ ಮಾಡಲಾಗಿದೆ.

ಕಾರ್ಖಾನೆ ಭೂಮಿಯನ್ನು ಕಬಳಿಸಲು ಖಾಸಗಿಯ ಕೆಲ ವ್ಯಕ್ತಿಗಳು ಭಾರೀ ಪ್ರಯತ್ನಪಟ್ಟರು. ಆದರೆ ಸಂಸದ ಮುದ್ದಹನುಮೇಗೌಡ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಭೂಮಿಯನ್ನು ರಕ್ಷಿಸಿ ಇಂದು ಇಸ್ರೋಗೆ ಹಸ್ತಾಂತರಿಸಲು ಕಾರಣಕರ್ತರಾಗಿದ್ದಾರೆ ಎಂದು ಬಣ್ಣಿಸಿದರು. ಸ್ಯಾಟ್‍ಲೈಟ್‍ಗೆ ಬಳಕೆಯಾಗುವ ಉಪಕರಣಗಳು ಇಲ್ಲಿ ಹೆಚ್ಚು ಉತ್ಪಾದನೆಯಾಗಲಿದೆ. ಇದೊಂದು ಹೆಮ್ಮೆಯ ವಿಷಯವಾಗಿದೆ. ಎಚ್‍ಎಂಟಿ ಕಾರ್ಖಾನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವಂತೆ ಇಸ್ರೋದ ಅಧಿಕಾರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು.

ವಸಂತ ನರಸಾಪುರದ ಕೈಗಾರಿಕಾ ಪ್ರದೇಶ ಸಾವಿರ ಕೋಟಿ ರೂ.ಗಳಲ್ಲಿ ಅಭಿವೃದ್ಧಿಯಾಗಲಿದೆ. ಇಲ್ಲಿ ಸ್ಥಾಪಿತವಾಗುವ ಕೈಗಾರಿಕೆಗಳಲ್ಲಿ ಮೊದಲು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವಂತೆ ಷರತ್ತು ವಿಧಿಸಲಾಗಿದೆ. ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಪ್ರತಿನಿತ್ಯ 25 ಸಾವಿರ ಮಂದಿ ತುಮಕೂರಿಗೆ ವಿವಿಧ ಕೆಲಸಕಾರ್ಯಗಳಿಗೆ ಬರುತ್ತಾರೆ. ಮೆಟ್ರೋ ರೈಲನ್ನು ವಿಸ್ತರಣೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು. ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ನಾನು ಎಸ್‍ಎಸ್‍ಎಲ್‍ಸಿ ಮುಗಿಸಿದ ನಂತರ ಎಚ್‍ಎಂಟಿ ಕಾರ್ಖಾನೆಯಲ್ಲಿ ಕೆಲಸ ಬಯಸಿದ್ದೆ. ಆಗ ನಮ್ಮ ತಂದೆಯವರು ನಿರಾಕರಿಸಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು.

ಸಂಸದ ಮುದ್ದಹನುಮೇಗೌಡ ಮಾತನಾಡಿ, ಎಚ್‍ಎಂಟಿಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿಯಾಗಿದೆ. ಸುಮಾರು 40 ವರ್ಷಗಳ ಕಾಲ ಜಾಗತೀಕರಣದ ಸ್ಥಳ ಇತಿಹಾಸವಾಗಲಿದೆ. ಇಸ್ರೋ ಸಂಸ್ಥೆ ಇಲ್ಲಿ ಪ್ರಾರಂಭವಾದರ ಇಲ್ಲಿ 3 ರಿಂದ 5 ಸಾವಿರ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ತುಮಕೂರು ವಿಶ್ವಭೂಪಟದಲ್ಲಿ ರಾರಾಜಿಸಲಿದೆ.  ಹಂತಹಂತವಾಗಿ ನಗರ ಸರ್ವತೋಮುಖವಾಗಿ ಅಭಿವೃದ್ಧಿಯಾಗುತ್ತಿದ್ದು, ರಾಯದುರ್ಗ ರೈಲ್ವೆ ಯೋಜನೆ ತ್ವರಿತವಾಗಿ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಚಂದ್ರಪ್ಪ, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ರಫೀಕ್ ಅಹಮ್ಮದ್, ಶಾಸಕ ಜ್ಯೋತಿಗಣೇಶ್ ಸೇರಿದಂತೆ ಮತ್ತಿತರರಿದ್ದರು.

Facebook Comments

Sri Raghav

Admin