ಹೋಳಿ ಹಬ್ಬದ ಮಹತ್ವ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ. ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಅಕ್ಷರಶಃ ಆಚರಣೆಗೆ ತರುವುದೇ ಈ ಹೋಳಿ ಹುಣ್ಣಿಮೆ.

ಕಾಮನ ಹಬ್ಬ ಅಥವಾ ಹೋಳಿ ಹಬ್ಬಕ್ಕೆ ಸಾಕಷ್ಟು ಪುರಾಣದ ಹಿನ್ನೆಲೆ ಇದೆ. ಅದಕ್ಕೆ ಪೂರಕವಾದ ಆಚರಣೆಗಳಿವೆ. ಹಿಂದೂ ಧರ್ಮದ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಇದೆ. ಪುರಾಣದ ಪ್ರಕಾರ ತಾರಕಾಸುರನಿಂದ ರಾಕ್ಷಸನು ಘೋರ ತಪಸ್ಸನ್ನು ಮಾಡಿ ಬ್ರಹ್ಮ ದೇವನಲ್ಲಿ ತನಗೆ ಸಾವೇ ಬರಬಾರದು ಎಂದು ವರವನ್ನು ಕೇಳುವನು. ಬ್ರಹ್ಮನು ಆ ವರವನ್ನು ನಿರಾಕರಿಸಿದಾಗ ಶಿವನ ಏಳು ದಿನಗಳ ಮಗುವಿನಿಂದ ತನಗೆ ಸಾವು ಬರಲಿ ಎಂಬ ವರವನ್ನು ಪಡೆದನು.

ನಂತರ ತಾರಕಾಸುರದಿಂದ ದೇವತೆಗಳಿಗೆ ಉಪಟಳ ಹೆಚ್ಚಾಯಿತು. ಅದು ಮಿತಿ ಮೀರಿದಾಗ ದೇವತೆಗಳು ಶಿವನಲ್ಲಿ ಮೊರೆ ಹೋಗುವರು. ಆದರೆ ಶಿವನು ಸಮಾಧಿ ಸ್ಥಿತಿಯಲ್ಲಿದ್ದನು. ಆಗ ಶಿವನ ಧ್ಯಾನವನ್ನು ಭಂಗಪಡಿಸಿ ಪಾರ್ವತಿಯನ್ನು ಮೋಹಿತನನ್ನಾಗಿ ಮಾಡಲು ರತಿ ಮನ್ಮಥರನ್ನು ದೇವತೆಗಳು ಒಪ್ಪಿಸುವರು.

ಅಂತೆಯೇ ರತಿ ಮನ್ಮಥರು ಶಿವನ ಮುಂದೆ ನೃತ್ಯವನ್ನು ಮಾಡಿ ಶಿವನ ಧ್ಯಾನಕ್ಕೆ ಭಂಗವನ್ನು ಉಂಟು ಮಾಡುವರು. ಇದರಿಂದ ವ್ಯಘ್ರನಾದ ಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟು ಭಸ್ಮ ಮಾಡಿದನು. ಆಗ ರತಿಯು ದುಃಖದಿಂದ ಶಿವನಲ್ಲಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥನು ಕಾಣುವಂತೆ ವರವನ್ನು ಕೊಟ್ಟನು. ಅಂದಿನಿಂದ ಲೋಕ ಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದನು.

ಈ ದಿನದ ಆಚರಣೆಯೇ ಕಾಮನ ಹಬ್ಬ. ಗ್ರಾಮೀಣ ಭಾಗಗಳಲ್ಲಿ ಅವಲಗಿಡ, ಅಡಿಕೆ ಗಿಡ, ಕಬ್ಬು , ಬೆರಣಿಯನ್ನು ಸೇರಿಸಿ ಜೊತೆಗೆ ಒಣ ಕಟ್ಟಿಗೆ ಸೇರಿಸಿ ಊರ ಮುಖಂಡರು ಅದನ್ನು ಪೂಜಿಸಿ ನೈವೇದ್ಯ ಮಾಡಿ ನಂತರ ಅದಕ್ಕೆ ಬೆಂಕಿ ಇಡುವರು. ನಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವುದು ವಾಡಿಕೆ.

ಪುರಾಣದ ಇನ್ನೊಂದು ಕಥೆಯ ಪ್ರಕಾರ ಹೋಲಿಕಾ ದಹನ. ಹಿರಣ್ಯಕಶಿಪು ಎಂಬ ಅತ್ಯಂತ ಬಲಶಾಲಿಯಾದ ರಾಕ್ಷಸನು ತನ್ನ ರಾಜ್ಯದಲ್ಲಿ ದೇವರ ಪೂಜೆಯನ್ನು ನಿಷೇಧಿಸಿ ಎಲ್ಲಾ ಪ್ರಜೆಗಳೂ ತನನ್ನೇ ಆರಾಧಿಸಬೇಕೆಂದು ಕಟ್ಟಪ್ಪಣೆ ಮಾಡುತ್ತಾನೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ಅವನ ಮಗ ಪ್ರಹ್ಲಾದನು ಮಹಾವಿಷ್ಣುವಿನ ಪರಮ ಭಕ್ತ. ಪುಟ್ಟ ಬಾಲಕ ಪ್ರಹ್ಲಾದನ ವಿಷ್ಣುವಿನ ಆರಾಧನೆಯನ್ನು ನಿಲ್ಲಿಸಲು ಸಾಧ್ಯವಾಗದಿದ್ದಾಗ ಮಗನನ್ನು ಕೊಲ್ಲಲು ಹಲವಾರು ರೀತಿ ಪ್ರಯತ್ನಿಸಿ ಹಿರಣ್ಯಕಶಿಪು ಅಲ್ಲಿಯೂ ವಿಫಲನಾಗುವನು. ನಂತರ ಹಿರಣ್ಯಕಶಿಪು ತನ್ನ ತಂಗಿ ಹೋಲಿಕಾಳ ನೆರವು ತೆಗೆದುಕೊಳ್ಳುವನು. ಅವಳು ಬೆಂಕಿಯು ಸುಡದೇ ಇರುವ ವರವನ್ನು ಪಡೆದಿರುತ್ತಾಳೆ.

ಆದರೆ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕೂರಿಸಿದಾಗ ಬೆಂಕಿಯು ಅವಳನ್ನೇ ಸುಡುತ್ತದೆ. ಪಾಪ ಕೃತ್ಯ ಎಸಗಿದ ಅವಳೇ ಸುಟ್ಟು ಭಸ್ಮವಾಗುತ್ತಾಳೆ. ಪ್ರಹ್ಲಾದನನ್ನು ಬೆಂಕಿಯು ಸುಡುವುದಿಲ್ಲ. ಹೀಗೆ ಹೋಲಿಕಾ ದುಷ್ಟ ಶಿಕ್ಷೆ ಶಿಕ್ಷ ರಕ್ಷಣೆಯ ಸಾಂಕೇತಿಕವಾಗಿ ಮುಂಬರುವ ಸುದಿನಗಳ ಸ್ವಾಗತಕ್ಕೆ ಬಣ್ಣಗಳ ಓಕುಳಿಯಾಡುವ ಪದ್ಧತಿ ರೂಢಿಗೆ ಬಂದಿದೆ.

ಈ ರಂಗಿನ ಹಬ್ಬಕ್ಕೆ ಪೂತನಿಯ ಸಂಹಾರನದ ಕಥೆಯೂ ಸೇರಿದೆ. ಶ್ರೀ ಕೃಷ್ಣ ಮಗುವಾಗಿದ್ದಾಗ ಅವನ ಸೋದರ ಮಾವ ಕಂಸರಾಜನು ಪೂತನಿ ಎಂಬ ರಾಕ್ಷಸಿಯನ್ನು ಶ್ರೀ ಕೃಷ್ಣನನ್ನು ಕೊಲ್ಲಲು ಕಳಿಸುವನು. ಬಾಲಕೃಷ್ಣನು ಪೂತನಿಯ ಎದೆ ಹಾಲಿನೊಂದಿಗೆ ರಕ್ತವನ್ನೂ ಹೀರಿ ಅವಳ ಸಂಹಾರ ಮಾಡುವನು. ಅದರಿಂದ ಶ್ರೀ ಕೃಷ್ಣನ ಮೈ ನೀಲಿ ಬಣ್ಣವಾಯಿತು. ಆದರೂ ರಾಧೆಯು ಕೃಷ್ಣನನ್ನು ಅನನ್ಯವಾಗಿ ಪ್ರೀತಿಸುವಳು. ಅವರಿಬ್ಬರ ಪ್ರೀತಿಯ ಪ್ರತೀಕವಾಗಿ ಹೋಲಿ ಆಚರಣೆ ಮಾಡಲಾಗುತ್ತದೆ.

ಬಣ್ಣ ಬಣ್ಣಗಳ ಎರಚಾಟ, ಕಾಮ ದಹನ, ಹೋಲಿಕಾ ದಹನ ಈ ಆಚರಣೆಗಳಲ್ಲಿದೆ. ಎಲ್ಲರೂ ಒಟ್ಟುಗೂಡಿ ದೀಪೋತ್ಸವವನ್ನು ಮಾಡಿ ಆ ದೀಪಗಳ ಮುಂದೆ ತಮ್ಮ ತಪ್ಪುಗಳನ್ನು ಕ್ಷಮಿಸುವಂತೆ ಭಗವಂತನಲ್ಲಿ ಪ್ರಾರ್ಥಿಸುವರು. ಮತ್ತೆ ಕೆಲವು ಕಡೆ ಮತ್ತು ತರಿಸುವ ಭಾಂಗ್ ಪಾನೀಯವನ್ನು ಸೇವಿಸುವ ರೂಢಿಯೂ ಇದೆ. ಈ ಹಬ್ಬವನ್ನು ಇಡೀ ಭಾರತದಲ್ಲಿ ಆಚರಿಸುತ್ತಾರೆ. ಅಲ್ಲದೆ ನೇಪಾಳ, ಬಾರ್ಸಿಲೋನ್, ಮಾರಿಷಸ್, ಫಿಜಿ, ಗಾನಾ, ಫಿಲಿಫೈನ್ , ಯುಎಸ್‍ಎ ಮತ್ತು ಯುಕೆ ದೇಶಗಳಲ್ಲೂ ಆಚರಿಸುತ್ತಾರೆ.
# ಮಮತಾ ಅಶೋಕ್

Facebook Comments