ರಜೆ ಇದೆ ಎಂದು ಮಜಾ ಮಾಡಲು ಮುಂದಾದೀರಿ ಹುಷಾರ್, ನಿಮಗಾಗಿ ಕಾಯ್ತಿದೆ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.22- ಸಾಲು ಸಾಲು ರಜೆ… ಹಬ್ಬ-ಹರಿದಿನಗಳ ಮಜ… ಮೈ ಮರೆತರೆ ಕೊರೊನಾ ಸೋಂಕಿನ ಸಜೆ… ಸಾರ್ವಜನಿಕರೇ ಎಚ್ಚರ..! ಲಾಕ್‍ಡೌನ್ ತೆರವಾಗಿದೆ. ಆದರೆ, ಕೊರೊನಾ ಕಬಂಧ ಬಾಹುವಿನ ಹಿಡಿತ ಹಾಗೆಯೇ ಇದೆ. ಹಬ್ಬಕ್ಕೆ ರಜೆಗಳು ಇವೆ ಎಂದು ಊರಿಗೆ ಹೋಗುವುದು, ಬರುವುದು ಮಾಡಿದರೆ ನೀವು ಕೊರೊನಾ ವಾಹಕರಾಗುತ್ತೀರ. ಎಚ್ಚರದಿಂದಿದ್ದರೆ ಕೊರೊನಾದಿಂದ ದೂರವಿರಬಹುದು.

ಸದ್ಯ ಕೊರೊನಾ ನಿಯಂತ್ರಣದಲ್ಲಿದೆ. ದಿನೇ ದಿನೇ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ಈಗ ದಸರಾ ರಜೆ ಇದೆ ಎಂದು ಪಟ್ಟಣದಿಂದ ಹಳ್ಳಿಗಳಿಗೆ ಹೋಗುವುದು, ಹಳ್ಳಿಗಳಿಂದ ಪಟ್ಟಣಗಳಿಗೆ ಬರುವುದು ಮಾಡಿದರೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತವೆ. ನೀವು ಕೂಡ ಕೊರೊನಾ ಬಾಧಿತರಾಗಿ ಸೋಂಕು ಮತ್ತು ಸಾವಿಗೆ ಈಡಾಗಬೇಕಾಗುತ್ತದೆ.

ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹಬ್ಬದ ಖುಷಿಯಲ್ಲಿ ಮೈ ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚರಿಸಿದ್ದಾರೆ. ಹಾಗಾಗಿ ನಾವು ಎಚ್ಚರಿಕೆಯಿಂದಿರಬೇಕಾಗಿರುವುದು ಸೂಕ್ತ. ನಾಳೆಯಿಂದ ದಸರಾ ಹಬ್ಬಕ್ಕೆ ಮೂರು ದಿನಗಳ ರಜೆ ಇದೆ.

ರಜೆ ಸಿಕ್ಕಿತೆಂದು ಮೋಜು-ಮಸ್ತಿಗಾಗಿ ನಾವು ಪ್ರವಾಸಕ್ಕೆ ತೆರಳುವುದು, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಇರುವುದು, ಮೈ ಮರೆಯುವುದು ಸಮಂಜಸವಲ್ಲ.  ಎಲ್ಲೆಡೆ ಸಾಂಕ್ರಾಮಿಕ ರೋಗ ಕೊರೊನಾ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ. ಹೇಗೆ, ಯಾವ ರೀತಿಯಲ್ಲಿ, ಯಾರಿಗೆ ಹಬ್ಬುತ್ತದೆ ಎಂಬುದು ಗೊತ್ತಿಲ್ಲ.

ಆರ್ಥಿಕ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್‍ಡೌನ್ ತೆರವುಗೊಳಿಸಿದೆ. ಆದರೆ, ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಸುವ ಮೂಲಕ ಕೊರೊನಾ ನಿಯಂತ್ರಿಸಬೇಕು.

ಊರುಗಳಿಗೆ ತೆರಳಿ ಹಬ್ಬ ಆಚರಿಸುವುದಕ್ಕಿಂತ ಮನೆಯಲ್ಲೇ ಇದ್ದು ಸರಳವಾಗಿ ಹಬ್ಬ ಆಚರಿಸಬೇಕು. ಅನಿವಾರ್ಯವಿದ್ದರೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಊರುಗಳಿಗೆ ತೆರಳಬೇಕು. ಕೊರೊನಾ ಲಸಿಕೆ ಸಿಗುವವರೆಗೂ ಹಾಗೂ ಕೊರೊನಾ ಮುಕ್ತ ಪರಿಸ್ಥಿತಿ ನಿರ್ಮಾಣವಾಗುವವರೆಗೂ ಸಾರ್ವಜನಿಕರು ಸಾಕಷ್ಟು ಎಚ್ಚರಿಕೆಯಿಂದ ಇರುವುದು ಸೂಕ್ತ.

ಈ ಬಾರಿ ದಸರಾ ಪ್ರವಾಸಗಳನ್ನು ಮುಂದೂಡಿ. ಮನೆ ಮಂದಿಯೊಂದಿಗೆ ಟೂರ್ ಹೋಗುವುದು, ಶಾಪಿಂಗ್ ಮಾಡುವುದು, ಜನ-ಜಂಗುಳಿ ಇರುವೆಡೆ ಭಾಗವಹಿಸುವುದು ಎಲ್ಲವನ್ನೂ ತಾತ್ಕಾಲಿಕವಾಗಿ ತಡೆ ಹಿಡಿಯಿರಿ. ಸಂತೋಷವಾಗಿ, ಸರಳವಾಗಿ ಮನೆಯಲ್ಲೇ ಹಬ್ಬವನ್ನು ಆಚರಿಸಿ. ಕೊರೊನಾ ನಿಯಂತ್ರಿಸಿ.

Facebook Comments