ಮನೆ ಚಾವಣಿ ಕುಸಿದು ತಂದೆ-ಮಗ ಸಾವು, ತಾಯಿ-ಮಗಳು ಗಂಭೀರ..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರು, ಅ.23- ರಾತ್ರಿ ಸುರಿದ ಭಾರಿ ಮಳೆಗೆ ಮನೆ ಕುಸಿದುಬಿದ್ದು ತಂದೆ ಮಗ ಮೃತಪಟ್ಟು, ತಾಯಿ, ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಂತಾಮಣಿ ತಾಲೂಕಿನ ವೈಜಕೂರು ಗ್ರಾಮದಲ್ಲಿ ನಡೆದಿದೆ. ತಂದೆ ರವಿಕುಮಾರ್(40), ಪುತ್ರ ರಾಹುಲ್(12) ಮೃತಪಟ್ಟ ದುರ್ದೈವಿಗಳು.

ಅವಶೇಷಗಳಡಿ ಸಿಲುಕಿ ಗಾಯಗೊಂಡಿರುವ ಮುನಿರಾಜಮ್ಮ(35) ಹಾಗೂ ರುಚಿತಾ(15) ಅವರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕೃಷಿಕನಾಗಿದ್ದ ರವಿಕುಮಾರ್ ತಮ್ಮ ಕುಟುಂಬದವರೊಂದಿಗೆ ಗಾಢ ನಿದ್ರೆಯಲ್ಲಿದ್ದರೂ ಹಲವು ದಿನಗಳಿಂದ ಸುರಿದ ಧಾರಕಾರ ಮಳೆಯಿಂದ ಮನೆ ಶಿಥಿಲಗೊಂಡು ಇಂದು ಮುಂಜಾನೆ 6.30 ರ ಸುಮಾರಿಗೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.

ಮನೆ ಕುಸಿದು ಬೀಳುತ್ತಿದ್ದಂತೆ ಅಕ್ಕಪಕ್ಕದವರು ಅಗ್ನಿಶಾಮಕ ದಳದವರಿಗೆ ಮಾಹಿತಿ ರವಾನಿಸಿ ಅವಶೇಷಗಳಡಿ ಸಿಲುಕಿದ್ದ ರಮಿಕುಮಾರ್ ಕುಟಂಬವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತಾಯಿ, ಮಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾ ರೆಡ್ಡಿ ಭೇಟಿ ಮಾಡಿ ಪರಿಶೀಲನೆ ನಡೆಸಿ ಸಂತ್ರಸ್ಥ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ 50 ಸಾವಿರ ರೂ.ಗಳ ವೈಯಕ್ತಿಕ ಪರಿಹಾರ ಘೋಷಣೆ ಮಾಡಿದರಲ್ಲದೆ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಐದು ಲಕ್ಷ ರೂ.ಗಳ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಸಂತ್ರಸ್ಥ ಕುಟುಂಬಕ್ಕೆ ಬಾಡಿಗೆ ಮನೆ ಕೊಡಿಸುವಂತೆ ಪಿಡಿಓಗೆ ಸೂಚನೆ ನೀಡಲಾಗಿದೆ. ನಾಲ್ಕು ದಲಿತ ಕುಟಂಬಗಳ ಮನೆಯನ್ನು ಕಟ್ಟಿಕೊಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

Facebook Comments