ಆಸ್ಪತ್ರೆಗೆ ಬಾರದೆ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ 8 ಲಕ್ಷ ಮಂದಿ ಸೋಂಕಿತರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.17-ನಗರದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದರೂ ಆಸ್ಪತ್ರೆಗಳು ಮಾತ್ರ ಖಾಲಿ ಖಾಲಿ. ಯಾಕೆ ಅಂತ ಅಚ್ಚರಿಪಡುತ್ತಿದ್ದೀರಾ… ಇಲ್ಲಿದೆ ನೋಡಿ ಸಿಕ್ರೇಟ್! ಸೋಂಕಿನ ಲಕ್ಷಣ ಹಾಗೂ ಸೋಂಕು ಕಾಣಿಸಿಕೊಂಡ ಬಹುತೇಕ ಮಂದಿ ಆಸ್ಪತ್ರೆಗಳಿಗೆ ತೆರಳುವ ಬದಲು ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವುದರಿಂದ ಇಂತಹ ಪರಿಸ್ಥಿತಿ ಬಂದಿದೆ.

ಸಿಲಿಕಾನ್ ಸಿಟಿಯಲ್ಲಿ ಬರೊಬ್ಬರಿ ಎಂಟು ಲಕ್ಷ ಮಂದಿ ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೋಂ ಐಸೋಲೇಷನ್‍ನಲ್ಲಿರುವವರ ಮೇಲೆ ನಿಗಾ ಇಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಹೋಂ ಐಸೋಲೇಷನ್ ನೋಡಲ್ ಅಧಿಕಾರಿಯಾಗಿ ಪಂಕಜ್‍ಕುಮಾರ್ ಪಾಂಡೆ ಅವರನ್ನು ನೇಮಕ ಮಾಡಲಾಗಿದೆ.

ಮನೆಗಳಲ್ಲಿ ಹೋಂ ಐಸೋಲೇಷನ್‍ನಲ್ಲಿರವರ ಪರೀಕ್ಷೆ ನಡೆಸಲು ಐದನೇ ಸೇಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ 10 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಪ್ರತಿದಿನ ಕರೆ ಮಾಡಿ ಸೋಂಕಿತರ ಆರೋಗ್ಯ ವಿಚಾರಣೆ ಮಾಡಲು ತೀರ್ಮಾನಿಸಲಾಗಿದೆ.

ಎರಡನೆ ಅಲೆ ಸಂದರ್ಭದಲ್ಲಿ 1.33 ಲಕ್ಷ ಸೋಂಕಿತರಿಗೆ ಕರೆ ಮಾಡಿ ಬಿಬಿಎಂಪಿ ಸಿಬ್ಬಂದಿಗಳು ಆರೋಗ್ಯ ವಿಚಾರಿಸುತ್ತಿದ್ದರು. ಆ ಸಂದರ್ಭದಲ್ಲಿ 36,053 ಸೋಂಕಿತರಿಗೆ ಕೌನ್ಸಿಲಿಂಗ್ ಮಾಡಲಾಗಿತ್ತು.

ಹೀಗಾಗಿ ಈ ಭಾರಿ ಸೋಂಕಿತರ ಆರೋಗ್ಯ ವಿಚಾರಿಸಲು ಟೆಲಿ ಕಾಲರ್ಸ್‍ಗಳನ್ನು ನೇಮಕ ಮಾಡಲು ಬಿಬಿಎಂಪಿ ಮುಂದಾಗಿದೆ. ಈಗಾಗಲೆ ನಗರದಲ್ಲಿರುವ ಬಹುತೇಕ ಮಂದಿ ಎರಡು ಡೋಸ್ ಲಸಿಕೆ ಪಡೆದಿರುವುದರಿಂದ ಹಾಗೂ ಓಮಿಕ್ರಾನ್ ತೀವ್ರತೆ ಕಡಿಮೆ ಇರುವುದರಿಂದ ಬಹುತೇಕ ಮಂದಿ ಹೋಂ ಐಸೋಲೇಷನ್‍ನಲ್ಲೆ ಗುಣಮುಖರಾಗುತ್ತಿರುವುದು ತುಸು ನೆಮ್ಮದಿ ತರಿಸಿದೆ.

ಕೊರೊನಾ ಎರಡನೆ ಅಲೆ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಬಹುತೇಕ ಮಂದಿ ಗುಣಮುಖರಾಗದೆ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದನ್ನು ಕಣ್ಣಾರೆ ಕಂಡಿದ್ದ ಬಹುತೇಕ ಮಂದಿ ಸೋಂಕು ಕಾಣಿಸಿಕೊಂಡರೂ ಆಸ್ಪತ್ರೆಗೆ ತೆರಳದೆ ಮನೆಗಳಲ್ಲೇ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿರುವುದರಿಂದ ಈ ಭಾರಿ ಬರೊಬ್ಬರಿ ಎಂಟು ಲಕ್ಷ ಮಂದಿ ಮನೆಗಳಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Facebook Comments