ಕರ್ನಾಟಕ ಉಗ್ರರ ನೆಲೆಯಾಗಲು ಬಿಡಲ್ಲ : ಗೃಹ ಸಚಿವ ಬೊಮ್ಮಾಯಿ

ಈ ಸುದ್ದಿಯನ್ನು ಶೇರ್ ಮಾಡಿ

ಕಾರವಾರ, ಜ.12- ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಉಗ್ರ ಚಟುವಟಿಕೆಗಳ ತಾಣವಾಗಲು ಬಿಡುವುದಿಲ್ಲ. ಈಗಾಗಲೇ ಮೂರು ಮಂದಿ ಬಂಧನಕ್ಕೊಳಗಾಗಿದ್ದು, ಉಳಿದ ಇಬ್ಬರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಸುದ್ದಿಗಾರರದಿಗೆ ಮಾತನಾಡಿದ ಅವರು, ತಮಿಳುನಾಡು ಮತ್ತು ದೆಹಲಿಯ ಪೊಲೀಸರು ಮೂರು ಮಂದಿ ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ಅವರ ಎಲ್ಲಾ ಚಟುವಟಿಕಗಳ ಮೇಲೆ ನಿಗಾ ಇಡಲಾಗಿದ್ದು, ಬಂಧಿತರ ವಿಚಾರಣೆ ಮುಂದುವರೆಸಲಾಗಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಅವರು ಸಭೆಗಳು ನಡೆಸಿದರು, ಅವರ ಚಟುವಟಿಕೆಗಳೇನು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಉಗ್ರರ ನೆಲೆಯಾಗಲು ಬಿಡುವುದಿಲ್ಲ ಎಂದು ಹೇಳಿದರು. ಮಂಗಳೂರು ಗಲಭೆ ಕುರಿತಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಸಿಡಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವರು, ನಮ್ಮ ಸರ್ಕಾರದಲ್ಲಿ ಪೊಲೀಸರನ್ನು ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಗಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ.

ಆದರೆ ಕುಮಾರಸ್ವಾಮಿಯವರ ಕಾಲದಲ್ಲಿ ಪೊಲೀಸರನ್ನು ಯಾವ ಕೆಲಸಕ್ಕೆ ಬಳಸಿಕೊಂಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ.  ಕುಮಾರಸ್ವಾಮಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವರು ಹೇಳಿದರು.

ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಸೇರಿದ್ದು, ಸಂಪುಟ ವಿಸ್ತರಣೆ ವೇಳೆ ನನ್ನ ಖಾತೆ ಬದಲಾವಣೆ ಮಾಡುವುದು ಅಥವಾ ಬಿಡುವುದನ್ನು ಮುಖ್ಯಮಂತ್ರಿಗಳೇ ನಿರ್ಧರಿಸುತ್ತಾರೆ ಎಂದು ಬೊಮ್ಮಾಯಿ ಹೇಳಿದರು.

Facebook Comments