ಹೋಂ ಕ್ವಾರಂಟೈನ್ ಉಲ್ಲಂಘಿಸಿದವರರ ವಿರುದ್ಧ ಎಫ್ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂನ್ 26- ಹೊರ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸಿತ್ತಿರುವವರನ್ನು 14 ದಿನಗಳ ಕಾಲ ಗೃಹ ಬಂಧನದಲ್ಲಿ ಇರಿಸಿ, ತೀವ್ರ ನಿಗಾ ವಹಿಸಿತ್ತಿದ್ದು, ನಿಯಮ ಉಲ್ಲಂಘಿಸಿದವರನ್ನು ಸ್ಥಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲಾಗುವುದಲ್ಲದೇ ಅವರ ವಿರುದ್ದ ಎಫ್ ಐ ಆರ್ ದಾಖಲಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತರಾದ ಜೆ. ಮಂಜುನಾಥ್ ತಿಳಿಸಿದ್ದಾರೆ.

ಈ ಬಗ್ಗೆ ಎಚ್ಚರಿಕೆ ನೀಡಿರುವ ಅವರು ಗೃಹ ದಿಗ್ಬಂಧನದಲ್ಲಿರುವವರ ಮೇಲೆ ನಿಗಾ ಇಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ವಿವಿಧ ಮಟ್ಟದಲ್ಲಿ ತಂಡಗಳನ್ನು ರಚಿಸಿದೆ.

ಈ ಹಿಂದೆ ಗೃಹ ದಿಗ್ಬಂದನ ಉಲ್ಲಂಘಿಸಿದವರಿಗೆ ಕೇವಲ ಎಚ್ಚರಿಕೆ ನೀಡಲಾಗುತ್ತಿತ್ತು. ಇದೀಗ ಈ ತಂಡಗಳಿಗೆ ಉಲ್ಲಘನೆ ಪ್ರಕರಣಗಳಲ್ಲಿ ತಕ್ಷಣ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲು ಹಾಗೂ ಎಫ್ ಐ ಆರ್ ದಾಖಲಿಸಲು ಸೂಚನೆ ನೀಡಲಾಗಿದೆ ಎಂದರು.

ಕಳೆದ 24 ಗಂಟೆಗಳಲ್ಲಿ ಗೃಹ ದಿಗ್ಬಂದನ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 12 ಜನರನ್ನು ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲಾಗಿದ್ದು, 30ಜನರ ವಿರುದ್ದ ಎಫ್ ಐ ಆರ್ ದಾಖಲಿಸಲಾಗಿದೆ ಎಂದರು.

ವಾರ್ಡ್ ಮಟ್ಟದಲ್ಲಿ ನಾಗರೀಕ ರಕ್ಷಣಾ ಸಿಬ್ಬಂದಿಯನ್ನೊಳಗೊಂಡಂತೆ ಸುಮಾರು ಒಂದು ಸಾವಿರ ತಂಡಗಳು ಹಾಗೂ ಬೂತ್ ಮಟ್ಟದಲ್ಲಿ ಎಂಟು ಸಾವಿರಕ್ಕೂ ಹೆಚ್ಚು ತಂಡಗಳನ್ನು ರಚಿಸಲಾಗಿದೆ ಎಂದ ಅವರು, ಇದರೊಂದಿಗೆ ಬಿಬಿಎಂಪಿ ನಾಗರೀಕ ಸ್ವಾಡ್ ಗಳನ್ನು ರಚಿಸಲಾಗಿದ್ದು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಇದಕ್ಕೆ ನೋಂದಾಯಿಸಿಕೊಂಡು ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.

ಅಲ್ಲದೇ, ಪ್ರತಿ ವಿಧಾನ ಸಭಾ ಕ್ಷೇತ್ರವಾರು ಸಂಚಾರಿ ಕಣ್ಗಾವಲು ತಂಡಗಳನ್ನು ರಚಿಸಲಾಗಿದ್ದು. 28 ವಿಧಾನ ಸಭಾ ಕ್ಷೇತ್ರಗಳಲ್ಲಿ ತಲಾ ಎರಡು ತಂಡಗಳು ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿವೆ ಎಂದರು. ಈ ತಂಡಗಳಿಗೆ ಗೃಹದಿಗ್ಬಂಧನ ಉಲ್ಲಂಘನೆ ಪ್ರಕರಣಗಳಲ್ಲಿ ಮನೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಹಾಗೆಯೇ, ಉಲ್ಲಂಘನೆಯಾದ ಬಗ್ಗೆ, ಸಾಂಸ್ಥಿಕ ದಿಗ್ಬಂದನಕ್ಕೆ ಒಳಪಡಿಸಿದವರ ಹಾಗೂ ಎಫ್ ಐ ಆರ್ ದಾಖಲಾದವರ ಮಾಹಿತಿಯನ್ನು ಹೋಮ್ ಕ್ವಾರೆಂಟೈನ್ ಆಪ್ ನಲ್ಲಿ ತಂಡದಿಂದ ನಮೂದಿಸಲಾಗುವುದು ಎಂದು ಅವರು ತಿಳಿಸಿದರು.

ಈಗಾಗಲೇ 57 ಸಾವಿರ ಜನರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಗೃಹ ದಿಗ್ಬಂದನಕ್ಕೆ ಒಳಪಟ್ಟಿರುತ್ತಾರೆ ಎಂದ ಅವರು, ಈ ವರೆಗೆ ಬಂದಿರುವ 1104 ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಇದರಲ್ಲಿ 929 ಪ್ರಕರಣಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊರೋನಾ ಸೋಂಕು ಹರಡದಂತೆ ತಡೆಯಲು ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸುವುದು ಅನಿವಾರ್ಯ ಹಾಗೂ ಅತ್ಯಗತ್ಯವಾಗಿದೆ ಎಂದ ಅವರು ಹೊರ ರಾಜ್ಯಗಳಿಂದ ಬರುವವರು ಕ್ವಾರಂಟೈನ್ ವಾಚ್ ಆಪ್ ನ್ನು ತಮ್ಮ ಮೊಬೈಲ್‍ಗಳಲ್ಲಿ ಅಳವಡಿಸಿಕೊಂಡು ನಿಯಮನುಸಾರ ಕಾಲಕಾಲಕ್ಕೆ ತಮ್ಮ ಚಿತ್ರಗಳನ್ನು ಅಪ್‍ಲೋಡ್ ಮಾಡಬೇಕೆಂದು ಅವರು ತಿಳಿಸಿದರು.

ಅಲ್ಲದೆ ಗೃಹ ದಿಗ್ಭಂಧನಕ್ಕೆ ಒಳಪಟ್ಟಿರುವವರ ನೆರೆ ಹೊರೆಯವರು ಸೇರಿದಂತೆ ಸಾರ್ವಜನಿಕರು ಅವರ ಮೇಲೆ ನಿಗಾವಹಿಸಿ ಉಲ್ಲಂಘನಾ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡಲು ದೂರವಾಣಿ ಸಂಖ್ಯೆ 9777-777-684 ಈ ಸಂಖ್ಯೆಗೆ ವಾಟ್ಸ್ ಆಪ್ ಹಾಗೂ ಟೆಲಿಗ್ರಾಮ್ ಮೂಲಕ,ಅಥವಾ ದೂರವಾಣಿ ಸಂ. 080-4545-1111 ಮೂಲಕ ವರಿದಿ ಮಾಡಬಹುದಾಗಿದೆ ಎಂದು ತಿಳಿಸಿದರು. ದೂರುಗಳನ್ನು ದಾಖಲಿಸುವಾಗ ನಿಖರವಾದ ಮಾಹಿತಿಯನ್ನು ಅಂದರೆ ಹೆಸರು ಹಾಗೂ ವಿಳಾಸವನ್ನು ಸ್ಷಪ್ಟವಾಗಿ ವರದಿಯಲ್ಲಿ ದಾಖಲಿಸುವಂತೆ ಅವರು ಮನವಿ ಮಾಡಿದ್ದಾರೆ.

Facebook Comments

Sri Raghav

Admin