ಇಬ್ಬರು ಮನೆಗಳ್ಳರ ಸೆರೆ : ಚಿನ್ನಾಭರಣಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ಮನೆಕಳ್ಳತನ ಮಾಡಿ ದೋಚಿದ ಆಭರಣಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಇಬ್ಬರು ವಿದೇಶಿ ಆರೋಪಿಗಳನ್ನು ಬಂಧಿಸಿ ಎರಡು ಮನೆಕಳವು ಪ್ರಕರಣಗಳನ್ನು ಮಾರತ್‍ಹಳ್ಳಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ನೇಪಾಳ ದೇಶದ ಕಾಲಿಕೋಟ ಜಿಲ್ಲೆಯ ಕೋಟಬಾಡ ಗ್ರಾಮದ ರಾಮ್‍ಬಹದೂರ್ ಬಿಸ್ವಾಕರ್ಮ (48), ನೇಪಾಳದ ನರಹರಿನಾಥ ಗ್ರಾಮದ ಕಮಲ್‍ರಾಜ್ ಬಿಸ್ವಾಕರ್ಮ (20) ಬಂಧಿತ ಆರೋಪಿಗಳು. ಆರೋಪಿಗಳಿಬ್ಬರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಹಗಲಿನಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ಅವುಗಳ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡುತ್ತಿದ್ದರು.

ಫೆ.10ರಂದು ಮಾರತ್‍ಹಳ್ಳಿ ಠಾಣೆ ವ್ಯಾಪ್ತಿಯ ಮುನೆಕೊಳಲ, ಶಿರಡಿಸಾಯಿನಗರದಲ್ಲಿ ಮನೆಯೊಂದರ ಬಾಗಿಲು ಮುರಿದು 45 ಸಾವಿರ ರೂ. ನಗದು, ಬೆಲೆ ಬಾಳುವ ಏಳು ವಾಚ್‍ಗಳನ್ನು ಕಳವು ಮಾಡಿದ್ದರು. ತಮ್ಮ ಬಗ್ಗೆ ಯಾವುದೇ ಸುಳಿವು ಸಿಗಬಾರದು ಎಂದು ಆರೋಪಿಗಳು ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ಮತ್ತು ಕಂಪ್ಯೂಟರ್ ಹಾರ್ಡ್ ಡಿಸ್ಕ್‍ಗಳನ್ನು ತೆಗೆದುಕೊಂಡು ಹೋಗಿದ್ದರು.

ಈ ಪ್ರಕರಣದ ತನಿಖೆಗೆ ಪೊಲೀಸರ ತಂಡ ರಚಿಸಲಾಗಿತ್ತು. ಏ.9ರಂದು ಸಂಜೆ ಮಾರತ್‍ಹಳ್ಳಿ ಬ್ರಿಡ್ಜ್ ಬಳಿ ದಾರಿ ಹೋಕರಿಗೆ ಚಿನ್ನದ ನೆಕ್ಲೆಸ್ ಹಾಗೂ ಒಂದು ಜೊತೆ ಮಾಟಿಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಅಪರಾಧ ಪತ್ತೆ ವಿಭಾಗದ ಪೊಲೀಸರು ಆರೋಪಿಗಳನ್ನು ಹಿಡಿದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ.

ಇವರ ಬಂಧನದಿಂದ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳಿಂದ 29 ಗ್ರಾಂ ತೂಕದ ಚಿನ್ನದ ಆಭರಣಗಳು, ಒಂದು ಕೆಜಿ ಬೆಳ್ಳಿ ವಸ್ತುಗಳು, ನಾಲ್ಕು ಸಾವಿರ ರೂ. ನಗದು ಸೇರಿ 2ಲಕ್ಷ ರೂ. ಮೌಲ್ಯದ ಮಾಲುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಬ್ಬಂದಿಗಳ ಕಾರ್ಯಾಚರಣೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

Facebook Comments