ಹುಳಿಮಾವು ಕೆರೆ ದುರಂತ : ಸಂತ್ರಸ್ತರನ್ನು ಕಾಡುತ್ತಿದೆ ಸಾಂಕ್ರಾಮಿಕ ರೋಗ ಭೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.26-ಹುಳಿಮಾವು ಕೆರೆ ಕೋಡಿ ಒಡೆದು ಸಾವಿರಾರು ಮನೆಗಳಿಗೆ ನುಗ್ಗಿದ್ದ ನೀರನ್ನು ತೆರವುಗೊಳಿಸಿದ್ದರೂ ಇಡೀ ಪ್ರದೇಶ ದುರ್ವಾಸನೆಯಿಂದ ಕೂಡಿರುವ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಸಂತ್ರಸ್ತರು ಎರಡನೆ ದಿನವಾದ ಇಂದು ಕೂಡ ಸಮುದಾಯ ಭವನದಲ್ಲೇ ಉಳಿದುಕೊಂಡಿದ್ದು, ಅವರಿಗೆ ಬಿಬಿಎಂಪಿ ವತಿಯಿಂದಲೇ ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ.

ಹಗಲು-ರಾತ್ರಿ ಮನೆಗಳಿಗೆ ನುಗ್ಗಿದ ನೀರನ್ನು ತೆರವುಗೊಳಿಸುವಲ್ಲಿ ಬಿಬಿಎಂಪಿ ಸಿಬ್ಬಂದಿಗಳು ಯಶಸ್ವಿಯಾಗಿದ್ದರೂ ದುರ್ನಾತ ತಡೆಯಲು ಸಾಧ್ಯವಾಗುತ್ತಿಲ್ಲ. ಮನೆ ಸ್ವಚ್ಛಗೊಳಿಸಿದರೂ ನೀರಿನಲ್ಲಿ ದವಸ-ಧಾನ್ಯ ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಕೆಲ ಕುಟುಂಬಗಳಿಗೆ ಊಟ-ತಿಂಡಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಡೀ ಪ್ರದೇಶದಲ್ಲಿ ದುರ್ನಾತ ಬೀರುತ್ತಿರುವುದರಿಂದ ಸ್ಥಳದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಇದೇ ರೀತಿ ದುರ್ನಾತ ಬೀರುತ್ತಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಅಂಗಲಾಚುತ್ತಿದ್ದುದು ಕಂಡುಬಂತು.

ಅಧಿಕಾರಿಗಳು ಬರ್ತಾರೆ, ನಮ್ಮ ಮನವಿ ಕೇಳ್ತಾರೆ, ಹೋಗ್ತಾರೆ. ಮತ್ತೆ ಈ ಕಡೆ ಬರೋದೇ ಇಲ್ಲ. ಇಂತಹ ವಾಸನೆ ಪ್ರದೇಶದಲ್ಲಿ ನಾವು ಇರೋದಾದರೂ ಹೇಗೆ ಎಂದು ಸ್ಥಳೀಯ ನಿವಾಸಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮನೆಗಳಿಂದ ನೀರು ತೆರವುಗೊಳಿಸಿದ್ದರೂ ರಸ್ತೆಗಳೆಲ್ಲ ಕೆಸರುಮಯವಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ.

ಮನೆಗಳಿಂದ ವಾಹನ ತೆಗೆದು ಕೆಲಸ-ಕಾರ್ಯಗಳಿಗೆ ತೆರಳಲು ಸ್ಥಳೀಯರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ಕಾಳಜಿಕೇಂದ್ರಗಳಲ್ಲಿರುವ ಸಂತ್ರಸ್ತರು ನಮಗೆ ಇಲ್ಲಿರಲು ಸಾಧ್ಯವಿಲ್ಲ. ನಮ್ಮ ಮನೆಗಳನ್ನು ಸ್ವಚ್ಛಗೊಳಿಸಿಕೊಡಿ. ನಾವು ನಮ್ಮ ಮನೆಗೆ ಹೋಗುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ.

ಭರವಸೆ: ಸ್ಥಳಕ್ಕೆ ಆಗಮಿಸಿದ ಕಾಪೆರ್ರೇಟರ್ ಭಾಗ್ಯಲಕ್ಷ್ಮಿ ಅವರು, ನೀರಿನಲ್ಲಿ ಕೊಚ್ಚಿಹೋಗಿರುವ ನಿಮ್ಮ ಎಲ್ಲ ದಾಖಲೆಗಳಿಗೆ ಬದಲಾಗಿ ಹೊಸ ದಾಖಲೆಗಳನ್ನು ಕೊಡಿಸುತ್ತೇನೆ. ತಿಂಗಳಿಗಾಗುವಷ್ಟು ದಿನಸಿ, ಬಟ್ಟೆಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನೀರು ನುಗ್ಗಿರುವ ಪ್ರದೇಶಗಳನ್ನು ಶುಚಿಗೊಳಿಸಲಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇನ್ನೆರಡು ದಿನ ಕಾಳಜಿಕೇಂದ್ರದಲ್ಲೇ ಕಾಲ ಕಳೆಯುವಂತೆ ಅವರು ಸಂತ್ರಸ್ತರಲ್ಲಿ ಮನವಿ ಮಾಡಿಕೊಂಡರು.

ಖಾಸಗಿ ರೆಸಿಡೆನ್ಸಿ ನಿವಾಸಿಗಳ ಮೇಲೆ ಅನುಮಾನ: ಹುಳಿಮಾವು ಕೆರೆ ಅಚ್ಚುಕಟ್ಟು ಪ್ರದೇಶದಲ್ಲೇ ತೇಜಸ್ ರೆಸಿಡೆನ್ಸಿ ಇದೆ. ಮಳೆ ಬಂದಾಗಲೆಲ್ಲ ಕೆರೆ ನೀರು ಈ ಪ್ರದೇಶಕ್ಕೆ ಹರಿಯುತ್ತಿತ್ತು ಎನ್ನಲಾಗಿದೆ. ಇದರಿಂದ ರೋಸಿಹೋಗಿದ್ದ ಅಲ್ಲಿನ ನಿವಾಸಿಗಳು ಮೊನ್ನೆ ಕೆರೆ ಏರಿ ಸಮೀಪ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಡ್ರೈವರ್‍ಗೆ ಹೇಳಿ ಕೆರೆಯ ಕಾಲುವೆಯನ್ನು ಸ್ವಲ್ಪ ಭಾಗ ತೆರವುಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ತೇಜಸ್ ರೆಸಿಡೆನ್ಸಿ ನಿವಾಸಿಗಳ ಮನವಿ ಮೇರೆಗೆ ಜೆಸಿಬಿ ಚಾಲಕ ಕೋಡಿಯ ಒಂದು ಭಾಗದಲ್ಲಿ ಸಣ್ಣ ರಂಧ್ರ ಮಾಡಿದ್ದ. ಆದರೆ, ನೀರಿನ ರಭಸ ಹೆಚ್ಚಾದ್ದರಿಂದ ಇಡೀ ಕೋಡಿಯೇ ಒಡೆದು ಹೋಗಿ ಇಷ್ಟೆಲ್ಲ ಅನಾಹುತ ಸಂಭವಿಸಿದೆ ಎನ್ನಲಾಗಿದ್ದು, ಈ ಕುರಿತಂತೆ ತೇಜಸ್ ರೆಸಿಡೆನ್ಸಿ ನಿವಾಸಿಗಳನ್ನು ವಿಚಾರಣೆಗೊಳಪಡಿಸಲು ಹುಳಿಮಾವು ಪೊಲೀಸರು ತೀರ್ಮಾನಿಸಿದ್ದಾರೆ.
ಹೋಂಗಾರ್ಡ್‍ಗಳು ವಶಕ್ಕೆ: ಅನಾಹುತ ಸಂಭವಿಸಿದ ಸಿಂಗಸಂದ್ರ ಭಾಗದಲ್ಲಿ ಕೆರೆ ಒತ್ತುವರಿ ಆಗದಂತೆ ನೋಡಿಕೊಳ್ಳಲು ಸಾಯಿನಾಥ್‍ರೆಡ್ಡಿ ಮತ್ತು ನಾಗರಾಜ್ ಎಂಬ ಹೋಂಗಾರ್ಡ್‍ಗಳನ್ನು ನೇಮಿಸಲಾಗಿತ್ತು.

ಮೊನ್ನೆ ಹುಳಿಮಾವು ಕೆರೆ ತುಂಬಿಹೋಗಿದ್ದ ಸಂದರ್ಭದಲ್ಲಿ ಈ ಇಬ್ಬರು ಎಇ ಶಿಲ್ಪಾ ಅವರಿಗೆ ಕರೆ ಮಾಡಿ ಕೆರೆ ತುಂಬಿದೆ ಎಂದು ಮಾಹಿತಿ ನೀಡಿದ್ದರಂತೆ. ಹೀಗಾಗಿ ಶಿಲ್ಪಾ ಅವರ ಸೂಚನೆ ಮೇರೆಗೆ ಜೆಸಿಬಿ ತರಿಸಿ ಕೆರೆ ಭಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇಬ್ಬರು ಹೋಂಗಾರ್ಡ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಜಪ್ತಿ:  ಕೆರೆಕೋಡಿ ಸಮೀಪ ಕಾಮಗಾರಿ ನಡೆಸಲಾಗುತ್ತಿದ್ದ ಜೆಸಿಬಿಯನ್ನು ಜಪ್ತಿ ಮಾಡಿದ್ದಾರೆ. ಜೆಸಿಬಿ ಚಾಲಕ ಮತ್ತು ಕಾಮಗಾರಿ ನಡೆಸುತ್ತಿದ್ದ ಕೆಲಸಗಾರರನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ.

ಫಿಜಿಯೋಥೆರಪಿ ಕೇಂದ್ರ ಸಂಪೂರ್ಣ ಹಾನಿ : ಕೇವಲ ಒಂದು ತಿಂಗಳ ಹಿಂದಷ್ಟೇ ಹೊಸದಾಗಿ ಆರಂಭವಾಗಿದ್ದ ಫಿಜಿಯೋಥೆರಪಿ ಕೇಂದ್ರವೊಂದು ಪ್ರವಾಹದಿಂದ ಸಂಪೂರ್ಣ ಹಾನಿಯಾಗಿದೆ.  ಕೇಂದ್ರವನ್ನು ಹೊಸದಾಗಿ ಆರಂಭಿಸಿದ್ದರಿಂದ ವಿಮೆ ಮಾಡಿಸಿರಲಿಲ್ಲ. ಕೆರೆ ಕೋಡಿ ಒಡೆದು ನೀರು ನುಗ್ಗಿದ ರಭಸಕ್ಕೆ ಕ್ಲಿನಿಕ್‍ನಲ್ಲಿದ್ದ ಉಪಕರಣಗಳು, ಹಾಸಿಗೆಗಳು ಹಾಗೂ ಔಷಧಗಳು ಸಂಪೂರ್ಣ ಹಾಳಾಗಿದ್ದು, ಸಿಬ್ಬಂದಿಗಳು ಹಾಳಾಗಿರುವ ವಸ್ತುಗಳನ್ನು ಹೊರಹಾಕುತ್ತಿದ್ದು, ಹಾನಿಯಿಂದ ಆಗಿರುವ ನಷ್ಟವನ್ನು ಭರಿಸಿಕೊಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Facebook Comments