ದಸರಾ ನಂತರ ರಂಗೇರಲಿದೆ ಹಾನಗಲ್-ಸಿಂದಗಿ ಬೈಎಲೆಕ್ಷನ್ ಕಣ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.14: ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿಷ್ಟೆಯ ಕಣವಾಗಿರುವ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳ ಉಪ ಚುನಾವಣೆ ದಸರಾ ಕಳೆಯುತ್ತಿದ್ದಂತೆ ರಂಗೇರಲಿದೆ. ಎರಡೂ ಕ್ಷೇತ್ರಗಳಲ್ಲಿ ಸಲ್ಲಿಸಿದ ನಾಮಪತ್ರಗಳ ಹಿಂಪಡೆಯುವ ಅವ ನಿನ್ನೆ ಮುಕ್ತಾಯವಾಗಿದ್ದು, ಒಟ್ಟು 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಹಾನಗಲ್‍ನಲ್ಲಿ ಬಿಜೆಪಿಯಿಂದ ಶಿವರಾಜ ಶರಣಪ್ಪ ಸಜ್ಜನರ, ಕಾಂಗ್ರೆಸ್‍ನಿಂದ ಶ್ರೀನೀವಾಸ ಮಾನೆ ಹಾಗೂ ಜೆಡಿಎಸ್‍ನಿಂದ ನಿಯಾಜ್ ಶೇಖ್ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಪಕ್ಷೇತರರೂ ಸೇರಿದಂತೆ ಈ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಸಸಿದ್ದಾರೆ. ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಭೂಸನೂರ ರಮೇಶ ಬಾಳಪ್ಪ, ಕಾಂಗ್ರೆಸ್‍ನಿಂದ ಅಶೋಕ ಮನಗೂಳಿ ಹಾಗೂ ಜೆಡಿಎಸ್‍ನಿಂದ ಅಂಗಡಿ ನಾಜೀಯಾ ಅಭ್ಯರ್ಥಿಗಳಾಗಿ ಸ್ರ್ಪಧಿಸಿದ್ದು ಒಟ್ಟು ಆರು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಈ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಮೂರೂ ಪಕ್ಷಗಳ ತಾರಾ ಪ್ರಚಾರಕರು ಹಾಗೂ ನಾಯಕರುಗಳು ದಸರಾ ಹಬ್ಬ ಮುಗಿಯುತ್ತಿದ್ದಂತೆ ಪ್ರಚಾರದಲ್ಲಿ ತೊಡಗಲಿದ್ದಾರೆ.

ಅ.16ರ ನಂತರ ಮೂರು ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗಲಿದ್ದಾರೆ. ಕಾಂಗ್ರೆಸ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಡಳಿತರೂಢ ಬಿಜೆಪಿಯಿಂದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ನಾಯಕರು ಪ್ರಚಾರಕ್ಕೆ ಇಳಿಯಲಿದ್ದಾರೆ. ಅದೇ ರೀತಿ ಜೆಡಿಎಸ್‍ನಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಸೇರಿದಂತೆ ಮುಖಂಡರು ಬಿರುಸಿನ ಪ್ರಚಾರ ಕೈಗೊಳ್ಳಲಿದ್ದಾರೆ.

ಶನಿವಾರದಿಂದ ಬಹಿರಂಗ ಪ್ರಚಾರದಿಂದ ತೆರೆ ಬೀಳುವವರೆಗೂ ಎರಡೂ ಕ್ಷೇತ್ರಗಳಲ್ಲಿ ರಾಜಕೀಯ ನಾಯಕರು ಬೀಡು ಬಿಟ್ಟು ನಿರಂತರ ಪ್ರಚಾರ ನಡೆಸಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ.

ಹೀಗಾಗಿ ಚುನಾವಣಾ ಪ್ರಚಾರದ ಕಾವು ದಿನದಿಂದ ದಿನಕ್ಕೆ ತಾರಕ್ಕೇರಲಿದ್ದು ಆರೋಪ-ಪ್ರತ್ಯಾರೋಪದ ಸುರಿಮಳೆಯಾಗಲಿದೆ. ಕ್ಷೇತ್ರದಲ್ಲಿ ಬೀಡು ಬಿಡುವ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ತಂತ್ರ-ಪ್ರತಿ ತಂತ್ರ ರೂಪಿಸಿ ಕಾರ್ಯಕರ್ತರನ್ನು ಹುರಿದುಂಬಿಸಿ ಪ್ರಚಾರವನ್ನು ನಡೆಸುವ ಸಾಧ್ಯತೆಗಳಿವೆ.

Facebook Comments