ತೆರಿಗೆ ವಂಚಿಸಬೇಡಿ, ಅಡ್ಡದಾರಿ ಹಿಡಿಬೇಡಿ : ಪ್ರಧಾನಿ ಮೋದಿ ಕಿವಿ ಮಾತು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.13-ತೆರಿಗೆ ಪಾವತಿಯಿಂದ ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ ಎಂದು ಹೇಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಜನರು ತೆರಿಗೆ ವಂಚಿಸಬಾರದು ಮತ್ತು ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿಯಬಾರದು ಎಂದು ಸಲಹೆ ಮಾಡಿದ್ದಾರೆ.

ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದ್ದು , ಇದರಲ್ಲಿ ಲಂಚ , ರುಷುವತ್ತುಗಳಿಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ.ತೆರಿಗೆ ಪಾವತಿದಾರರನ್ನು ಸಮಸ್ಯೆಗಳಿಗೆ ಸಿಲುಕಿಸುವ ಪದ್ಧತಿಯನ್ನು ಹೋಗಲಾಡಿಸಿ ಇದರಲ್ಲಿರುವ ಎಲ್ಲಾ ತೊಡಕುಗಳನ್ನು ನಿವಾರಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಮೋದಿ ಹೇಳಿದರು.

ತೆರಿಗೆ ವ್ಯವಸ್ಥೆಯಲ್ಲಿರುವ ಕಾನೂನುಗಳನ್ನು ಮತ್ತಷ್ಟು ಸರಳಗೊಳಿಸಿ ತೆರಿಗೆದಾರರಿಗೆ ಸ್ನೇಹಮಯಿ ವಾತಾವರಣ ನಿರ್ಮಿಸಲು ಕೆಲವು ಉಪ ಕ್ರಮಗಳನ್ನು ಘೋಷಿಸಲಾಗಿದೆ ಎಂದು ಅವರು ಘೋಷಿಸಿದರು.

ತೆರಿಗೆ ಪಾವತಿ ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯ. ಪ್ರಾಮಾಣಿಕ ತೆರಿಗೆ ಪಾವತಿದಾರರಿಂದ ದೇಶದ ಪ್ರಗತಿಯಾಗುತ್ತದೆ. ಇದರಿಂದ ರಾಷ್ಟ್ರದ ಆರ್ಥಿಕ ಬೆಳವಣಿಗೆಗೂ ನೆರವಾಗುತ್ತದೆ ಎಂದು ಮೋದಿ ಹೇಳಿದರು.

ಜನರು ಪ್ರಾಮಾಣಿಕವಾಗಿ ತೆರಿಗೆಗಳನ್ನು ಪಾವತಿಸುವುದರಿಂದ ದೇಶದ ಮುನ್ನಡೆಗೆ ಸಹಕಾರಿಯಾಗುತ್ತದೆ. ಪ್ರಾಮಾಣಿಕ ತೆರಿಗೆ ಪಾವತಿದಾರರು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಾರೆ ಎಂದು ಅವರು ತಿಳಿಸಿದರು.

ನೇರ ತೆರಿಗೆಗಳ ಸುಧಾರಣೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮತ್ತೊಂದು ಹೊಸ ಉಪಕ್ರಮವೊಂದಕ್ಕೆ ಚಾಲನೆ ನೀಡಿದ್ದಾರೆ.

ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವ “ಟ್ರಾನ್ಸ್ ಪರೆಂಟ್ ಟ್ಯಾಕ್ಸೇಷನ್ : ಹಾನರಿಂಗ್ ದಿ ಹಾನೆಸ್ಟ್” ಎಂಬ ಹೊಸ ಪ್ಲಾಟ್‍ಫಾರಂನನ್ನು ಮೋದಿ ಇಂದು ಉದ್ಘಾಟಿಸಿದರು. ಅಲ್ಲದೇ ನೇರ ತೆರಿಗೆ ಸುಧಾರಣೆ ನಿಟ್ಟಿನಲ್ಲಿ ಕೆಲವು ಘೋಷಣೆಗಳನ್ನೂ ಸಹ ಹೊರಡಿಸಿದರು.

ದೇಶದಲ್ಲಿ ಇಂದಿನಿಂದ ಹೊಸ ತೆರಿಗೆ ಯಾತ್ರೆ ಆರಂಭವಾಗಿದೆ. ದೇಶದಲ್ಲಿ ಮಹತ್ವದ ಬದಲಾವಣೆಗಳು ಆಗುತ್ತಿವೆ. ತೆರಿಗೆ ಪಾವತಿಯಲ್ಲಿ ದೇಶದ ಜನರು ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ಧಾರೆ. ಅವರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ ಎಂದು ಮೋದಿ ಹೇಳಿದರು.

ಪ್ರಾಮಾಣಿಕ ತೆರಿಗೆ ಪಾವತಿದಾರರು ಇತರರಿಗೆ ಮಾರ್ಗದರ್ಶಿಯಾಗುತ್ತಾರೆ. ತಮ್ಮಂತೆ ಎಲ್ಲರೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಲು ಅವರು ಪ್ರೇರಣೆ ನೀಡುತ್ತಾರೆ ಎಂದು ಪ್ರಧಾನಿ ಬಣ್ಣಿಸಿದರು.

ವಿಡಿಯೋ ಲಿಂಕ್ ಮೂಲಕ ನಡೆದ ಈ ವಿಶೇಷ ಕಾರ್ಯಕ್ರಮವನ್ನು ವಿಧ ವಾಣಿಜ್ಯ ಒಕ್ಕೂಟಗಳು, ಕೈಗಾರಿಕಾ ಸಂಘಗಳು, ಲೆಕ್ಕಪರಿಶೋಧಖರ ಸಂಘಗಳು, ಟ್ಯಾಕ್ಸ್ ಕನ್ಸಲ್‍ಟೆಂಟ್‍ಗಳು ಮತ್ತು ಗಣ್ಯ ತೆರಿಗೆ ಪಾವತಿದಾರರು ಸಾಕ್ಷೀಕರಿಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಹಾಯಕ ಸಚಿವ ಅನುರಾಜ್ ಠಾಕೂರ್ ಅವರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆ ಬಗ್ಗೆ ವಿವರಿಸಿದರು.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಮುಖ ತೆರಿಗೆ ಸುಧಾರಣೆಗಳನ್ನು ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕರನ್ನು ಗೌರವಿಸುವ ಪಾರದರ್ಶಕ ತೆರಿಗೆ ವೇದಿಕೆಯ ಮತ್ತೊಂದು ಉಪಕ್ರಮವಾಗಿದೆ.

ಕಳೆದ ವರ್ಷ ಕಾರ್ಪೊರೇಟ್ ತೆರಿಗೆಯಲ್ಲಿ ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿದೆ. ಅದೇ ರೀತಿ ಹೊಸ ತಯಾರಿಕಾ ಘಟಕಗಳ ತೆರಿಗೆ ದರವನ್ನು ಶೇ.15ಕ್ಕೆ ತಗ್ಗಿಸಲಾಗಿದೆ. ಲಾಭಾಂಶ ವಿತರಣೆ ತೆರಿಗೆಯನ್ನೂ ಸಹ ರದ್ದುಗೊಳಿಸಲಾಗಿದೆ.

ತೆರಿಗೆ ದರಗಳನ್ನು ಕಡಿಮೆಗೊಳಿಸಿ, ನೇರ ತೆರಿಗೆ ಕಾನೂನುಗಳನ್ನು ಸರಳೀಕರಣಗೊಳಿಸುವ ಮೂಲಕ ಈ ವರ್ಗದ ತೆರಿಗೆ ವಿದಾನದಲ್ಲಿ ಸಾಕಷ್ಟು ಸುಧಾರಣೆಗಳಿಗೆ ಕೇಂದ್ರ ಸರ್ಕಾರ ಮತ್ತು ಸಿಬಿಡಿಟಿ ಈಗಾಗಲೇ ಒತ್ತು ನೀಡಿದೆ.

Facebook Comments

Sri Raghav

Admin