“ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧಕ್ಕೆ ಸರ್ಕಾರ ಗಂಭೀರ ಚಿಂತನೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.2- ಸಮಾಜಕ್ಕೆ ಕಂಟಕವಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಹುಕ್ಕಾಬಾರ್‍ಗಳನ್ನು ನಿಷೇಧ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ತಿಳಿಸಿದರು. ಬೇರೆ ಬೇರೆ ರಾಜ್ಯಗಳಲ್ಲಿ ಹುಕ್ಕಾಬಾರ್‍ಗಳನ್ನು ನಿಷೇಧಿಸಲು ಯಾವ ರೀತಿ ಕ್ರಮಗಳನ್ನು ಕೈಗೊಂಡಿದ್ದಾರೆ ಹಾಗೂ ಇದಕ್ಕೆ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದ ಅವರು, ರಾಜ್ಯಾದ್ಯಂತ ಹುಕ್ಕಾಬಾರ್‍ಗಳನ್ನು ನಿಷೇಧಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶಾಸಕಿ ಸೌಮ್ಯರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾದಕ ವಸ್ತುಗಳ ವಿರುದ್ಧ ರಾಜ್ಯ ಸರ್ಕಾರ ಸಮರವನ್ನೇ ಸಾರಿದೆ. ಇದು ಇಂದು ಅಥವಾ ನಾಳೆಗೆ ನಿಲ್ಲುವುದಿಲ್ಲ. ನಾನು ಎಷ್ಟು ದಿನ ಸಚಿವನಾಗಿ ಇರುತ್ತೇನೋ ಅಲ್ಲಿಯವರೆಗೂ ಇದು ಮುಂದುವರೆಯುತ್ತದೆ. ಈ ಪ್ರಕರಣದಲ್ಲಿ ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ದರೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಡ್ರಗ್ಸ್ ಸೇವನೆ ಸಾಮಾಜಿಕ ಪಿಡುಗಾಗಿದೆ. ಅನೇಕ ಕುಟುಂಬಗಳು, ಪೋಷಕರು, ವಿದ್ಯಾರ್ಥಿಗಳು ಇದರ ದುಷ್ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವುದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಇದಕ್ಕೆ ಸಮಾಜ, ಮಾಧ್ಯ, ಎನ್‍ಜಿಒ ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು. ನಾವು ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದೊಂದು ಜನಜಾಗೃತಿಯಾಗಿ ಪರಿವರ್ತನೆಯಾದರೆ ಮಾತ್ರ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ನಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಚಾರವಾಗುತ್ತಲೇ ಇದೆ. 2016ರಿಂದ 20ರವರೆಗೆ ಕೇವಲ 120 ಪ್ರಕರಣಗಳು ಮಾತ್ರ ದಾಖಲಾಗಿದ್ದವು. 2020ರಿಂದ ಇತ್ತೀಚಿನವರೆಗೆ 2786 ಪ್ರಕರಣಗಳು ದಾಖಲಾಗಿವೆ. ಐದು ವರ್ಷಗಳಲ್ಲಿ ಆಗದ ಕೆಲಸ ಐದು ತಿಂಗಳಲ್ಲಿ ಆಗಿದೆ ಎಂದು ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು. ಹುಕ್ಕಾಬಾರ್‍ಗಳಿಗೆ ಬಿಬಿಎಂಪಿ ಲೈಸೆನ್ಸ್ ನೀಡುತ್ತದೆ. ಕೆಲವರು ಕಾನೂನಿನÀಡಿ ನಡೆಸಿದರೆ, ಮತ್ತೆ ಕೆಲವರು ಕಾನೂನು ಬಾಹಿರವಾಗಿ ನಡೆಸುತ್ತಾರೆ.

ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕು. ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ನಮ್ಮ ಜತೆ ಕೈ ಜೋಡಿಸಬೇಕು. ಡ್ರಗ್ಸ್ ಸೇವನೆಗೆ ಒಳಗಾದವರನ್ನು ವ್ಯಸನಮುಕ್ತ ಕೇಂದ್ರಗಳಿಗೆ ಸೇರಿಸಬೇಕು. ನಂತರ ಅವರಿಗೆ ಕೌನ್ಸಿಲಿಂಗ್ ನಡೆಸಬೇಕು. ಇದಕ್ಕೆ ಗೃಹ ಇಲಾಖೆ ಜತೆ ಬೇರೆ ಬೇರೆ ಇಲಾಖೆಗಳು ಕೈ ಜೋಡಿಸಬೇಕೆಂದು ಸಚಿವರು ಮನವಿ ಮಾಡಿದರು. ಡ್ರಗ್ಸ್ ಇತ್ತೀಚೆಗೆ ಔಷಧಿ ಅಂಗಡಿ, ಅಂಚೆ, ಕೊರಿಯರ್ ಮೂಲಕವೂ ಸಿಗುತ್ತಿದೆ. ಇದು ಎಲ್ಲಿಂದ ಬರುತ್ತಿದೆ ? ಇದರ ಹಿಂದಿನ ರೂವಾರಿಗಳು ಯಾರು? ಹೇಗೆ ಸರಬರಾಜು ಆಗುತ್ತದೆ ಎಂಬುದನ್ನು ಪತ್ತೆ ಹಚ್ಚುವುದು ತುಂಬ ಕಷ್ಟಕರ ಕೆಲಸ ಎಂದರು.

ನಮ್ಮ ಸರ್ಕಾರ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ಎನ್‍ಡಿಪಿಎಸ್ ಕಾಯ್ದೆ ಕೇಂದ್ರ ಸರ್ಕಾರದ್ದಾದರೆ ಇದಕ್ಕೆ ನಿಯಮಗಳನ್ನು ರೂಪಿಸುವುದು ರಾಜ್ಯಗಳಿಗೆ ಇದೆ. ಎನ್‍ಡಿಪಿಎಸ್ ಕಾಯ್ದೆಯಲ್ಲಿ ಬಂಧನವಾದರೆ ಒಂದು ವರ್ಷ ಆಚೆಗೆ ಬರಲು ಸಾಧ್ಯವಿಲ್ಲ. ಮೊದಲು ಸಣ್ಣ ಪ್ರಮಾಣದ ದಂಡ ಕಟ್ಟಿ ಬಿಡುತ್ತಿದ್ದರು. ಈಗ ಇದು ಸಾಧ್ಯವಿಲ್ಲ ಎಂದು ಹೇಳಿದರು.

ಡ್ರಗ್ಸ್ ಇಂದು ಬಿಸ್ಕೆಟ್, ಚಾಕೊಲೆಟ್ ಮೂಲಕವೂ ಸರಬರಾಜಾಗುತ್ತಿದೆ. ಇದನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಆದರೂ ಪೊಲೀಸರು ಸತತ ಪರಿಶ್ರಮ ವಹಿಸುತ್ತಿರುವುದರಿಂದ ಸಾಕಷ್ಟು ಸುಧಾರಣೆಯಾಗುತ್ತಾ ಬಂದಿದೆ. ಸಮಾಜದ ಪಿಡುಗಾದ ಇದಕ್ಕೆ ಕಡಿವಾಣ ಹಾಕಲು ಜಾಹಿರಾತು ಫಲಕ, ಬ್ಯಾನರ್, ಸ್ಟಿಕ್ಕರ್‍ಗಳನ್ನು ಮುದ್ರಣ ಮಾಡಿಸಿ ಎಲ್ಲಾ ವಿಭಾಗೀಯ ಉಪ ಪೆÇಲೀಸ್ ಆಯುಕ್ತರಿಗೆ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತರಿಸಿ ಅರಿವು ಮೂಡಿಸುತ್ತಿದ್ದೇವೆ . ಗೃಹ ಇಲಾಖೆಯಲ್ಲದೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಮೂಲಕವೂ ಅರಿವು ಮೂಡಿಸಲಾಗುತ್ತಿದೆ ಎಂದರು.

ನಿಯಮಗಳನ್ನು ಉಲ್ಲಂಘನೆಮಾಡುವ ಹುಕ್ಕಾಬಾರ್‍ಗಳು ಕಂಡು ಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮ ಸರ್ಕಾರ ಡ್ರಗ್ಸ್ ವಿರುದ್ಧ ದ ಕಾನೂನು ಸಮರ ಮುಂದುವರೆಸಲಿದೆ. ಡಾರ್ಕ್‍ವೆಬ್ ಆನ್‍ಲೈನ್ ಮೂಲಕ ಸರಬರಾಜಾಗುತ್ತಿರುವ ಮಾದಕ ವಸ್ತುಗಳ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೆ ಆರೋಪಿಗಳ ವಿರುದ್ಧ ಪಿಐಟಿಎನ್‍ಡಿಪಿಎಸ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

Facebook Comments