ತೋಟಗಾರಿಕಾ ಬೆಳೆಗಳಿಗೆ ಬಳಸುವ ವಿದ್ಯುತ್ ಬಿಲ್‍ ವಿನಾಯಿತಿ : ಸಚಿವ ಬಿ.ಸಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರುನಗರ ಜಿಲ್ಲೆ, ಏ.15 ಕೃಷಿ ಪಂಪ್‍ಸೆಟ್‍ಗಳ ವಿದ್ಯುತ್ ಬಿಲ್ ಕಟ್ಟುವುದರಿಂದ ರೈತರಿಗೆ ಹೇಗೆ ವಿನಾಯಿತಿ ನೀಡಲಾಗಿದೆಯೋ ಅದೇ ರೀತಿ ತೋಟಗಾರಿಕಾ ಬೆಳೆಗಳಿಗೆ ಬಳಸಲಾಗುವ ಹಸಿರು ಮನೆಗಳಲ್ಲಿ ವಿದ್ಯುತ್ ಬಳಕೆಯ ಬಿಲ್‍ನ್ನು ಕಟ್ಟುವುದರಿಂದ ರೈತರಿಗೆ ವಿನಾಯಿತಿ ನೀಡುವ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ರ ಹಿನ್ನೆಲೆ ರಾಜ್ಯದಲ್ಲಿ ಜಾರಿಯಿರುವ ಲಾಕ್‍ಡೌನ್‍ನಿಂದಾಗಿ ನಾಡಿನ ರೈತರು ಅನುಭವಿಸುತ್ತಿರುವ ತೊಡಕುಗಳು ಹಾಗೂ ತೊಂದರೆಗಳನ್ನು ದೂರ ಮಾಡಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಪರಿಶೀಲಿಸಿದರು.

ಕೃಷಿಗೆ ಬಳಸಲಾಗುವ ಕೀಟನಾಶಕಗಳ ಉತ್ಪಾದಕರು ಈ ಲಾಕ್‍ಡೌನ್ ಅವಧಿಯ ಲಾಭ ಪಡೆದು ರೈತರಿಗೆ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಇಲಾಖೆಯಿಂದ ಪರೀಕ್ಷೆಗೆ ಒಳಪಡಿಸಲಾದ 375 ಉತ್ಪನ್ನಗಳ ನಮೂನೆಗಳಲ್ಲಿ 170 ಕಳಪೆ ಗುಣಮಟ್ಟದಿಂದ ಕೂಡಿರುವುದು ದೃಡಪಟ್ಟಿದೆ ಹಾಗೂ 6 ಕೋಟಿ ಮೌಲ್ಯದ ಕೃಷಿಗೆ ಬಳಸಲಾಗುವ ರಸಗೊಬ್ಬರ, ಕೀಟನಾಶಕ, ಕಳಪೆ ಭಿತ್ತನೆ ಬೀಜಗಳನ್ನು ವಶಪಡಿಸಿಕೊಂಡಿದ್ದು, ಪೊಲೀಸರು 32 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಕುರಿತು ಇನ್ನು ಮುಂದೆ ಕೃಷಿ ಹಾಗೂ ತೋಟಗಾರಿಕಾ ಅಧಿಕಾರಿಗಳು ತಪಾಸಣಾ ಭೇಟಿಗಳನ್ನು ಹಮ್ಮಿಕೊಂಡು ನಕಲಿ ಕೀಟನಾಶಕಗಳು ಮಾರಾಟವಾಗದಂತೆ ಕ್ರಮವಹಿಸಿಬೇಕು. ತಪ್ಪಿದಲ್ಲಿ ಕೃಷಿ ಜಾಗೃತ ಸಮಿತಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಪ್ರಕರಣಗಳು ಕಂಡುಬಂದಲ್ಲಿ ಅಂತಹ ಅಧಿಕಾರಿ ಮೇಲೆ ಕ್ರಮ ಜರುಗಿಸಲಾಗುವುದು ಎಂದರು.

ಈಗಾಗಲೇ 19 ಜಿಲ್ಲೆಗಳ ಭೇಟಿ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, 23ನೇ ಜಿಲ್ಲೆಯಾಗಿ ಬೆಂಗಳೂರು ನಗರ ಜಿಲ್ಲೆಗೆ ಭೇಟಿ ನೀಡಲಾಗಿದೆ ಎಂದು ಹೇಳಿದರು. ಕೃಷಿ ಉತ್ಪನ್ನ, ಸಲಕರಣೆ, ಉಪಕರಣಗಳ ಬಳಕೆ ಹಾಗೂ ಸಾಗಾಣಿಕೆ ಮುಕ್ತವಾಗಿಸುವುದಲ್ಲದೇ ದುರಸ್ಥಿ ವ್ಯವಸ್ಥೆಯನ್ನು ತೆರೆಯುವಂತೆ ಸೂಚನೆ ನೀಡಿದ ಅವರು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳು ಸೇರಿ ರೈತರ ನೆರವಿಗಾಗಿ ಅಗ್ರಿ ವಾರ್ ರೂಂನ್ನು ಸ್ಥಾಪಿಸುವಂತೆ ಸೂಚನೆ ನೀಡಿದರು.

ರೈತರು ವಾಸವಾಗಿರುವ ಸ್ಥಳದಿಂದ ಮತ್ತೊಂದು ಊರಿನಲ್ಲಿರುವ ತಮ್ಮ ಜಮೀನಿಗೆ ತೆರಳಲು ಹಸಿರು ಪಾಸ್ ನೀಡುವಂತೆ ಕೃಷಿ ಇಲಾಖೆ ಜಂಟಿನಿರ್ದೇಶಕರಿಗೆ ಸೂಚಿಸಿದ ಸಚಿವರು ಪಾಸ್ ಅವಧಿಯನ್ನು ಲಾಕ್‍ಡೌನ್ ಮುಗಿಯುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಇದರಿಂದ ರೈತರು ಪದೆ-ಪದೇ ಪಾಸ್‍ಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂದರು. ತೋಟಗಾರಿಕೆ ಇಲಾಖೆ ವತಿಯಿಂದ ಕೂಡ ರೈತರಿಗೆ ಹಸಿರು ಪಾಸ್ ನೀಡುವ ವ್ಯವಸ್ಥೆ ಆಗಬೇಕಿದೆ ಎಂದ ಅವರು ರಾಜ್ಯ ಅಗ್ರಿ ವಾರ್ ರೂಂನಲ್ಲಿ ಬಹುತೇಕ ತೋಟಗಾರಿಕಾ ಸಂಬಂಧಿತ ಕುಂದು ಕೊರತೆಗಳು ಬರುತ್ತಿವೆ ಎಂದು ತಿಳಿಸಿದರು.

ಲಾಕ್‍ಡೌನ್ ಅವಧಿಯಲ್ಲಿ ಹೂ ಬೆಳೆಗಳ ಬೇಡಿಕೆ ತೀವ್ರವಾಗಿ ಇಳಿಮುಖವಾಗಿದ್ದು, ಸುಮಾರು 250 ಕೋಟಿ ರೂಗಳ ನಷ್ಟವನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂದಾಜು ಮಾಡಲಾಗಿದೆ ಎಂದು ತೋಟಗಾರಿಕಾ ಉಪನಿರ್ದೇಶಕರಾದ ದೇವರಾಜ್ ಅವರು ತಿಳಿಸಿದರು. ಇದೂ ಸೇರಿದಂತೆ ಇತರೆ ಬೆಳೆಗಳ ನಷ್ಟ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಹಾಗೂ ಪರಿಹಾರ ಕೋರಲಾಗುವುದು ಎಂದು ಸಚಿವರು ತಿಳಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಕೃಷ್ಣಪ್ಪ, ಆನೇಕಲ್ ತಾಲ್ಲೂಕಿನ ಶಾಸಕ ಡಿ.ಶಿವಣ್ಣ, ಬೆಂಗಳೂರು ನಗರದ ಜಿಲ್ಲಾಧಿಕಾರಿಯಾದ ಜಿ.ಎನ್.ಶಿವಮೂರ್ತಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮರಿಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ.ಶಿವರಾಮೇಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ಶ್ರೀನಿವಾಸ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments

Sri Raghav

Admin