“ಮಿನಿಸ್ಟರ್ ಆಗ್ತೀನಿ ಅನ್ನೋ ನಂಬಿಕೆಯಿಲ್ಲ, ಬಿಜೆಪಿಗೆ ಬಂದು ತಪ್ಪು ಮಾಡಿದೆ” : ಗೂಳಿಹಟ್ಟಿ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ನನಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿದೆ ಎಂಬ ನಂಬಿಕೆಯೇ ಹೋಗಿದೆ. ನಾನು ಬಿಜೆಪಿಗೆ ಬಂದು ಅವರ ಮುಲಾಜಿಗೆ ಸಿಲುಕಿ ತಪ್ಪು ಮಾಡಿದೆ ಎನ್ನಿಸುತ್ತಿದೆ ಎಂದು ಮಾಜಿ ಸಚಿವ ಹಾಗೂ ಹೊಸದುರ್ಗ ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಅವರು, 2008ರಲ್ಲಿ ನನಗೆ ಅನ್ಯಾಯವಾಗಿತ್ತು. ಈ ಬಾರಿ ಅದನ್ನು ಸರಿಪಡಿಸುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ನನ್ನನ್ನು ನಿರ್ಲಕ್ಷಿಸಲಾಗಿದೆ. ಹಾಗಾಗಿ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೆ ಯಾವುದೇ ಆಸೆ ಮತ್ತು ನಿರೀಕ್ಷೆಗಳು ಇಲ್ಲದಂತಾಗಿದೆ. ನನಗೆ ಮುಂದಿನ ದಿನಗಳಲ್ಲಿ ಸಂಪುಟದಲ್ಲಿ ಅವಕಾಶ ಸಿಗಬಹುದು ಎಂಬ ನಂಬಿಕೆಯೇ ಉಳಿದಿಲ್ಲ. ಸುಮ್ಮನೆ ಮನೆಯಲ್ಲಿರಬೇಕಿತ್ತು, ಯಾಕಾದರೂ ಬಂದು ಬಿಜೆಪಿ ಸೇರಿದೆನೋ ಎಂಬ ಜಿಗುಪ್ಸೆ ಬಂದಿದೆ.

2007ರ ಆರಂಭದಲ್ಲಿ ಪಕ್ಷೇತರನಾಗಿದ್ದನನಗೆ ಉತ್ತಮ ಅವಕಾಶಗಳಿತ್ತು. ಆದರೆ ನಾನು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದೆ. ನನಗೆ ಸಚಿವ ಸ್ಥಾನ ಕೊಟ್ಟು ಒಂದು ಖಾತೆಯನ್ನೂ ಕೊಟ್ಟಿದ್ದರು. ಆದರೆ ಅದರಿಂದ ಒಬ್ಬ ಕಾನ್‍ಸ್ಟೆಬಲ್‍ನನ್ನು ವರ್ಗಾವಣೆ ಮಾಡಲಾಗಿರಲಿಲ್ಲ.

ಆನಂತರನನ್ನನ್ನು ಸಚಿವ ಸ್ಥಾನದಿಂದ ಕೈಬಿಡಲಾಯಿತು. ನಂತರದ ಬೆಳವಣಿಗೆಗಳಲ್ಲಿ ಯಡಿಯೂರಪ್ಪ ಅವರನ್ನು ನಂಬಿ ಬಿಜೆಪಿ ಸೇರ್ಪಡೆಯಾದೆ.ಆರ್. ಅಶೋಕ್ ಟಿಕೆಟ್ ಕೊಡಿಸಿದರು. ನಾನು ಒಬ್ಬರನ್ನು ನಂಬಿದ ಮೇಲೆ ಸದಾ ಅವರ ಜೊತೆ ನಿಲ್ಲುತ್ತೇನೆ. ಹಾಗಾಗಿ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದರು.

ಕಳೆದ ಒಂದೂವರೆ ವರ್ಷದಲ್ಲಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ. ನಾನು ಮೊದಲು ಕಾಂಗ್ರೆಸ್‍ನಲ್ಲಿದ್ದವನು. ಸಹಜವಾಗಿ ಈಗಲೂ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅದನ್ನೇ ಮುಂದಿಟ್ಟುಕೊಂಡು ನಾನು ಪಕ್ಷ ಬಿಟ್ಟು ಹೋಗುತ್ತೇನೆಎಂದು ಅಪಪ್ರಚಾರ ಮಾಡಲಾಗಿತ್ತು.

ರೆಸಾರ್ಟ್‍ನಲ್ಲಿದ್ದಾಗಲೂ ನನ್ನನ್ನೇ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದರು. ದೆಹಲಿಯಲ್ಲೂ ನನ್ನ ಬಗ್ಗೆ ಅನುಮಾನಗಳು ಕೇಳಿ ಬಂದಿದೆ. ಇದರಿಂದ ಸಾಕಷ್ಟು ನೊಂದಿದ್ದೇನೆ ಎಂದು ಹೇಳಿದರು.

ನಾನು ಯಾರಿಗೂ ಹೆದರುವುದಿಲ್ಲ. ಪಕ್ಷ ಬಿಟ್ಟು ಹೋಗುವುದಾದರೆ ಧೈರ್ಯವಾಗಿ ಹೇಳಿಯೇ ಹೋಗುತ್ತೇನೆ. ಯಾರ ಮುಲಾಜಿನಲ್ಲೂ ನಾನು ಬದುಕಿಲ್ಲ. ಕ್ಷೇತ್ರದ ಜನ ನನಗೆ ಊಟ ಹಾಕಿ, ಹಣ ನೀಡಿ ಮತ ಹಾಕಿ ಗೆಲ್ಲಿಸಿದ್ದಾರೆ. ಅವರಿಗಷ್ಟೇ ನಾನು ಹೆದರುತ್ತೇನೆ. ಸಚಿವ ಸ್ಥಾನ ಕೊಟ್ಟರೆ ಸಂತೋಷ, ಕೊಡದಿದ್ದರೆ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡಿರುತ್ತೇನೆ ಎಂದರು.

Facebook Comments

Sri Raghav

Admin