ಅಮೆರಿಕದ ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ, ಕೊರೋನಾಗೆ 43,000 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್/ವಾಷಿಂಗ್ಟನ್, ಏ.21- ಅಗೋಚರ ವೈರಿ ಕೊರೊನಾ ವೈರಸ್ ದಾಳಿಯಿಂದ ಸೂಪರ್‍ಪವರ್ ಅಮೆರಿಕ ಅಕ್ಷರಶಃ ನರಕವಾಗುತ್ತಿದೆ. ಒಂದೆಡೆ ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ಸಾವು-ನೋವು ಮತ್ತು ಸೋಂಕು ಪ್ರಕರಣಗಳು, ಮತ್ತೊಂದಡೆ ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಇನ್ನೊಂದೆಡೆ ಆರ್ಥಿಕ ಹೊಡೆತಗಳಿಂದ ಅಮೆರಿಕ ತತ್ತರಿಸುತ್ತಿದೆ.

ಅಮೆರಿಕದಲ್ಲಿ ಈವರೆಗೂ ಸುಮಾರು 43,000 ಮಂದಿ ಬಲಿಯಾಗಿದ್ದು, 8 ಲಕ್ಷಕ್ಕೂ ಅಧಿಕ ಜನರಲ್ಲಿ ಮಾರಕ ಸೋಂಕು ದೃಢಪಟ್ಟಿದೆ. ಜಾನ್ಸ್ ಹಾಪ್‍ಕಿನ್ಸ್ ಯೂನಿವರ್ಸಿಟಿ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, 24 ತಾಸುಗಳ ಅವಧಿಯ ಮುಕ್ತಾಯದ ವೇಳೆ (ಭಾನುವಾರ ರಾತ್ರಿ 8 ಗಂಟೆ) ಅಮೆರಿಕದಲ್ಲಿ ಒಟ್ಟಾರೆ 42,260ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ.

ಭಾರೀ ಕಳವಳಕಾರಿ ಸಂಗತಿ ಎಂದರೆ ನ್ಯೂಯಾರ್ಕ್ ನಗರವೊಂದರಲ್ಲೇ ಈವರೆಗೆ 18,000ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವೈರಸ್ ಬಲಿಪಡೆದಿದೆ. ಇಲ್ಲಿ ಸೋಂಕಿತರ ಸಂಖ್ಯೆ 2.65 ಲಕ್ಷಕ್ಕೇರಿದೆ.ನ್ಯೂಜೆರ್ಸಿ ನಗರದಲ್ಲೂ ಕೊರೊನಾ ಅಟ್ಟಹಾಸ ಆತಂಕಕಾರಿಯಾಗಿದೆ. ಅಲ್ಲಿ ಈವರೆಗೆ 5,500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸೋಂಕಿರತ ಸಂಖ್ಯೆ 79,000 ದಾಟಿದೆ.

ಅಮೆರಿಕದ ಎಲ್ಲ 50 ರಾಜ್ಯಗಳು ಒಂದಿಲ್ಲೊಂದು ರೀತಿಯಲ್ಲಿ ಕೊರೊನಾ ಕಂಟಕದಿಂದ ನರಳುವಂತಾಗಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಈ ಹೆಮ್ಮಾರಿಯನ್ನು ನಿಯಂತ್ರಿಸಲು ಹರಸಾಹಸ ಮುಂದುವರಿಸಿದೆ.  ಅಮೆರಿಕದಲ್ಲಿ ಕೊರೊನಾ ವಿರುದ್ಧದ 72 ಔಷಧಿಗಳು ಮತ್ತು ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದೆ.

Facebook Comments

Sri Raghav

Admin