ಮಲಗಿದ್ದ ಮನೆಗೆಲಸದ ಬಾಲಕನಿಗೆ ಕಾದ ನೀರು ಎರಚಿದ ವೈದ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹಟಿ,ಸೆ.3- ಇನ್ನು ಮಲಗಿದ್ದಾನೆ ಎಂದು ಕುಪಿತಗೊಂಡ ವೈದ್ಯನೊಬ್ಬ ಮನೆಗೆಲಸ ಮಾಡುವ ಬಾಲಕನ ಮೇಲೆ ಕಾದಿದ್ದ ಬಿಸಿನೀರನ್ನು ಎರಚಿ ಅಮಾನವೀಯತೆ ಮೆರೆದಿದ್ದಾರೆ. ಅಸ್ಸಾಂನ ದಿಬ್ರುಗ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 12 ವರ್ಷದ ಬಾಲಕ ಸುಟ್ಟಗಾಯಗಳಿಂದ ಬಳಲುತ್ತಿದ್ದಾನೆ. ವೈದ್ಯ ಮತ್ತು ಪತ್ನಿ ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನಿವೃತ್ತ ವೈದ್ಯ ಸಿದ್ಧಿ ಪ್ರಸಾದ್ ಡ್ಯೂರಿ ಬಾಲಕನ ಮೇಲೆ ಬಿಸಿ ಬಿಸಿ ನೀರನ್ನು ಎರಚಿದ್ದರಿಂದ ಬೊಬ್ಬೆಗಳು ಎದ್ದವು. ವೈದ್ಯರ ಪತ್ನಿ ಮಂಜುಲಾ ಮೊರನ್ ಚಿಕಿತ್ಸೆ ನೀಡಲು ಯತ್ನಿಸಿದ್ದರು ಎಂದು ಬಾಲಕ ಪೊಲೀಸರಿಗೆ ತಿಳಿಸಿದ್ದಾನೆ.

ಈಗ ಬಾಲಕನಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆತನ ಹೇಳಿಕೆಯನ್ನು ಪಡೆಯಲಾಗಿದೆ. ಮಕ್ಕಳ ಮತ್ತು ಹದಿಹರೆಯದ ಕಾರ್ಮಿಕ ನಿಷೇಧ ಕಾಯ್ದೆ ಮತ್ತು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ವೈದ್ಯ ದಂಪತಿವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪದ್ಮನಾಭ್ ಬರುವಾ ತಿಳಿಸಿದ್ದಾರೆ.

ಬಾಲಕನ ತಾಯಿ ತೀರಿಕೊಂಡಿದ್ದು ಆತನ ತಂದೆ ಜೋರ್ಹತ್‍ನಲ್ಲಿ ವಾಸವಾಗಿದ್ದಾರೆ. ಈತ ಕಳೆದ ಏಪ್ರಿಲ್‍ನಿಂದ ವೈದ್ಯನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅನಾಮಧೇಯ ಮೂಲದಿಂದ ಈಗ ವಿಡಿಯೋ ಪಡೆದ ನಂತರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ಬಾಲಕನನ್ನು ರಕ್ಷಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಅರ್ಪನಾ ಬೋರಾ ತಿಳಿಸಿದ್ದಾರೆ.

Facebook Comments