ಹೊಟೇಲ್‍ ನಲ್ಲಿ ಬೆಂಕಿ, ಪೀಠೋಪಕರಣಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.14- ವಾಹನ ನಿಲುಗಡೆ ಸ್ಥಳದಲ್ಲಿ ಕಾಣಿಸಿಕೊಂಡ ಬೆಂಕಿ ಹೊಟೇಲ್‍ಗೆ ಆವರಿಸಿಕೊಂಡು ಪೀಠೋಪಕರಣಗಳು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಟ್ರಿನಿಟಿ ಸರ್ಕಲ್‍ನಲ್ಲಿರುವ ಅಜಂತಾ ಹೊಟೇಲ್‍ಗೆ ರಾತ್ರಿ 11.30ರ ಸುಮಾರಿಗೆ ಬೆಂಕಿ ಆವರಿಸಿದೆ. ತಕ್ಷಣ ಹಲಸೂರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ಬೆಂಕಿ ಹೊಟೇಲ್ ತುಂಬ ಆವರಿಸುತ್ತಿದ್ದಂತೆ ಹೊಟೆಲ್ ಒಳಗಿದ್ದ ಏಳು ನೌಕರರ ಪೈಕಿ ಇಬ್ಬರು ನೌಕರರು ಕಿಟಕಿಯಿಂದ ಹೊರಬಂದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಪೊಲೀಸರು ಹಾಗೂ ಎರಡು ವಾಹನಗಳಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ ಹೊಟೇಲ್ ಒಳಗಿದ್ದ ಐದು ಮಂದಿಯನ್ನು ರಕ್ಷಿಸಿದ್ದಾರೆ.

ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಿದ್ದ ಆಟೋ ಮತ್ತು ಬೊಲೆರೋ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಹೊಟೆಲ್‍ಗೆ ಆವರಿಸಿರುವುದು ಗೊತ್ತಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಪಾರ್ಕಿಂಗ್ ಸ್ಥಳದಲ್ಲಿದ್ದ ಆಟೋ, ಬೊಲೆರೋ ವಾಹನ ಸುಟ್ಟು ಹೋಗಿವೆ. ಅಲ್ಲದೆ, ಬೆಂಕಿಯಿಂದಾಗಿ ಹೊಟೇಲ್‍ನಲ್ಲಿದ್ದ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ.

ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿರ ಬಹುದೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments