ಹೋಟೆಲ್ ಉದ್ಯಮ, ಪ್ರವಾಸಿ ಗೈಡ್‍ಗಳಿಗೆ ಅಗತ್ಯ ಸಹಕಾರ : ಸಚಿವ ಆನಂದ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.27-ಕೊರೊನಾ 2ನೇ ಅಲೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ಯಮ,ಸಣ್ಣಪುಟ್ಟ ಕೆಲಸ ಮಾಡುವವರು, ಗೈಡ್‍ಗಳು ಸೇರಿದಂತೆ ಮತ್ತಿತರರಿಗೆ ಸರ್ಕಾರದ ವತಿಯಿಂದ ಅಗತ್ಯ ಸಹಕಾರ ನೀಡಲು ಚಿಂತನೆ ನಡೆದಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.

ವಿಧಾನಸೌಧ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ವಿಧಾನಸೌಧದ ಕಾನರೆನ್ಸ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. 2ನೇ ಕೋವಿಡ್ ಸಂದರ್ಭದಲ್ಲಿ ಬಹುತೇಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಿನಿಮಾ ರಂಗ, ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದರಿಂದ ಸರ್ಕಾರ ನೆರವು ನೀಡಲು ಸಿದ್ದವಿದೆ ಎಂದು ಹೇಳಿದರು.

ಸಿನಿಮಾ ರಂಗದವರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಏಕಗವಾಕ್ಷಿ ಪದ್ದತಿಗೆ ಒಳಪಡಿಸಲು ಆಲೋಚಿಸಲಾಗುತ್ತಿದೆ. ಇದರಿಂದ ಒಂದಿಷ್ಟು ಬಿಕ್ಕಟ್ಟುಗಳು ಬಗೆಹರಿಯಲಿವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಕೋವಿಡ್ ನಿಂದ ಪ್ರವಾಸೋದ್ಯಮ ಕುಂಠಿತ ಎರಡು ವರ್ಷಗಳಿಂದ ತೀರ್ವ ಸಮಸ್ಯೆಯಾಗಿದೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೂ 25 ಸಾವಿರ ಕೋಟಿ ನಷ್ಟವಾಗಿದೆ ಎಂದರು.

ಅತಿ ಹೆಚ್ಚಿನ ಉದ್ಯೋಗಾವಕಾಶ ಇಲಾಖೆ ನೀಡಿದೆ. ಉದ್ಯಮವನ್ನ ಮತ್ತೆ ಪುನರ್ಜೀವಗೊಳಿಸಬೇಕಿದೆ. ಹೊಟೇಲ್,ರೆಸಾರ್ಟ್ ಆಸ್ತಿ ತೆರಿಗೆ 50% ಕಡಿತ, ಹೊಟೇಲ್ ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಏಪ್ರಿಲ್-ಜೂನ್‍ನಿಂದ ವಿದ್ಯುತ್ ಶುಲ್ಕವನ್ನೂ ಕೂಡ ಮನ್ನಾ ಮಾಡಲಾಗಿದೆ ಎಂದರು.

ವ್ಯಾಪಾರ ಮತ್ತು ಸೌಲಭ್ಯಗಳನ್ನು ಉತ್ತೇಜಿಸಲು ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿಯೇ ಕರ್ನಾಟಕದಲ್ಲಿ ಪ್ರವಾಸೋದ್ಯಮ ವಲಯದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಸಿ ಬಂಡವಾಳ ಆಕರ್ಷಿಸಲು ಹೂಡಿಕೆದಾರರ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಸಿನಿಮಾದವರಿಗೆ ಕೆಲವು ಕಡೆ ನಿರ್ಬಂಧವಿದೆ. ಚಿತ್ರೀಕರಣ ಶೂಟಿಂಗ್ ಗೆ ನಿರ್ಬಂಧವಿದೆ. ಇಂತಹ ಸಮಸ್ಯೆ ಬಗ್ಗೆ ಗಮನಹರಿಸಿದ್ದೇವೆ. ಸಿಂಗಲ್ ವಿಂಡೋ ನಡಿ ಅವಕಾಶ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಪ್ರಾಚ್ಯವಸ್ತು,ಅರಣ್ಯ, ಪ್ರವಾಸೋಧ್ಯಮ ಇಲಾಖೆ ಇಲಾಖೆಗಳ ಅನುಮತಿ ಸಿಗಲಿದೆ. ಏಕಗವಾಕ್ಷಿ ವ್ಯವಸ್ಥೆಯಡಿ ಇದನ್ನ ತರುತ್ತೇವೆ. ಇದರಿಂದ ಅವರಿಗೂ ಅನುಕೂಲವಾಗಲಿದೆ. ನಮಗೂ ಉದ್ಯಮ ಬೆಳೆಯಲು ಅವಕಾಶವಾಗಲಿದೆ ಎಂದರು.

ಮುಂದಿನ ವರ್ಷ ಫೆಬ್ರವರಿ 23ರಿಂದ 25ರವರೆಗೆ ಮೂರು ದಿನಗಳ ಕಾಲ ಅರಮನೆ ಮೈದಾನದಲ್ಲಿ ಪ್ರವಾಸೋದ್ಯ ಎಕ್ಸ್‍ಪೊ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಸಮ್ಮತಿಸಿದ್ದಾರೆ ಎಂದರು. ಪ್ರವಾಸೋದ್ಯಮ ಸೊಸೈಟಿಯವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡಲು ತೀರ್ಮಾನಿಸಲಾಗಿದೆ. ಈ ಹಿಂದೆಯೂ ಕೋವಿಡ್ ಸಂದರ್ಭದಲ್ಲೂ ನಮ್ಮ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಕ್ಷೇತ್ರವು ಉದ್ಯೋಗ ಮತ್ತು ಆದಾಯ ಸೃಷ್ಟಿಸುವ ವಲಯವಾಗಿದೆ. ಸರಿಸುಮಾರು 32 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗ ಈ ವಲಯದಿಂದ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ವಿಷನ್ 2025 ಘೋಷಿಸಲಾಗಿದೆ. ಇದರಿಂದ ನಮಗೆ ಬಂಡವಾಳ ಹೂಡಿಕೆಯಾಗಲಿದೆ ಎಂಬ ವಿಶ್ವಾಸವನ್ನು ಆನಂದ್ ಸಿಂಗ್ ವ್ಯಕ್ತಪಡಿಸಿದರು.

2025ಕ್ಕೆ ಪ್ರವಾಸೋದ್ಯಮವು ದೇಶದ ಜಿಡಿಪಿಗೆ ಶೇ.25ರಷ್ಟು ಕೊಡುಗೆಯನ್ನು ನೀಡಲಿದೆ. ಆ ವೇಳೆಗೆ ಇಡೀ ದೇಶದಲ್ಲೇ ಕರ್ನಾಟಕ ಪ್ರವಾಸೋದ್ಯಮದಲ್ಲಿ ಮೊದಲ ಸ್ಥಾನಕ್ಕೆ ಬರಲಿದೆ ಎಂದರು. ರಾಜ್ಯದ 18 ಪ್ರವಾಸಿ ಉದ್ಯಮಗಳನ್ನು ಪ್ರವಾಸೋದ್ಯಮ ಉತ್ಪನ್ನ ಬೆಂಬಲಿಸುವ ಗುರಿ ಹೊಂದಿದೆ. ಕೋವಿಡ್‍ನಿಂದ ತತ್ತರಿಸಿದವರಿಗೆ ಇದು ಪೂರಕವಾಗಲಿದೆ. 364 ಪ್ರವಾಸಿ ಗೈಡ್ ಗಳಿಗೆ 5000 ರೂ. ಸೇರಿದಂತೆ ಒಟ್ಟು 18.20 ಲಕ್ಷ ಸಹಾಯಧನ ನೀಡಲಾಗಿದೆ.

Facebook Comments