ಹೋಟೆಲ್‌ಗಳಿಗೆ ಲೈಸೆನ್ಸ್ ಶುಲ್ಕದ ಹೊರೆ, ಅಧಿಕಾರಿಗಳ ಅಂದಾದರ್ಬಾರ್…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.22- ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನೆಲಕಚ್ಚಿದ್ದ ಉದ್ದಿಮೆಗಳ ನೆರವಿಗೆ ನಿಲ್ಲಬೇಕಾಗಿದ್ದ ಸರ್ಕಾರ, ಉದ್ಯಮಿಗಳಿಂದ ಯಾವುದೇ ದಯೆ-ದಾಕ್ಷಿಣ್ಯವಿಲ್ಲದೆ ಪರವಾನಗಿ ಶುಲ್ಕ ಮತ್ತು ಇತರೆ ತೆರಿಗೆ ವಸೂಲಿಗಿಳಿಯುವ ಮೂಲಕ ಉದ್ಯಮಗಳು ಮತ್ತಷ್ಟು ಅದಃಪತನಕ್ಕಿಳಿಯುವಂತೆ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಸುಮಾರು 9 ತಿಂಗಳ ಕಾಲ ಸ್ಥಗಿತಗೊಂಡಿದ್ದ ಎಲ್ಲ ಉದ್ದಿಮೆಗಳ ಆರ್ಥಿಕ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಕೇಂದ್ರ ಸರ್ಕಾರ ಘೋಷಿಸಿರುವ ಆತ್ಮ ನಿರ್ಭರ್ ಈಗ ಪ್ರಶ್ನಾರ್ಹವಾಗಿದೆ.

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಉದ್ಯಮಗಳ, ಕೈಗಾರಿಕೆಗಳ ನೆರವಿಗೆ ನಿಲ್ಲಬೇಕಾಗಿತ್ತು. ಅವರಿಗೆ ಪೂರಕವಾದ ಪರವಾನಗಿ ನವೀಕರಣ, ಶುಲ್ಕ ಇಳಿಕೆ ಮುಂತಾದವುಗಳಲ್ಲಿ ಸರ್ಕಾರ ಸಹಾಯ ಹಸ್ತ ಚಾಚಬೇಕಿತ್ತು. ಆದರೆ, ಇದಾವುದನ್ನೂ ಸರ್ಕಾರ ಮಾಡುತ್ತಿಲ್ಲ. ಯಥಾರೀತಿ ಶುಲ್ಕ ವಸೂಲಿ ಮಾಡುತ್ತಿದೆ. ಪರವಾನಗಿ ಶುಲ್ಕ ಕಟ್ಟದಿದ್ದರೆ ಉದ್ಯಮಗಳನ್ನು ಪ್ರಾರಂಭ ಮಾಡುವಂತೆಯೂ ಇಲ್ಲ ಎಂಬ ಕಟ್ಟಾಜ್ಞೆ ಹೊರಡಿಸಿದೆ.

ಹೊಟೇಲ್ ಉದ್ಯಮಗಳೂ ಇದಕ್ಕೆ ಹೊರತಾಗಿಲ್ಲ. ಎಲ್ಲ ಉದ್ಯಮಗಳಂತೆ ಹೊಟೇಲ್ ಉದ್ಯಮಗಳೂ ಕೂಡ ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದವು. ತ್ರಿ ಸ್ಟಾರ್, ಫೈವ್ ಸ್ಟಾರ್ ಹೊಟೇಲ್‍ಗಳು ಕಳೆದ 10 ತಿಂಗಳಿಂದಲೂ ಸಂಪೂರ್ಣವಾಗಿ ಬಂದ್ ಆಗಿದ್ದವು. ಕೆಲವು ಹೊಟೇಲ್‍ಗಳು ಕೋವಿಡ್ ಕೇಂದ್ರಗಳಾಗಿ ಮಾರ್ಪಟ್ಟಿದ್ದವು. ಲಾಕ್‍ಡೌನ್ ತೆರವಾದ ಹಿನ್ನೆಲೆಯಲ್ಲಿ ಇಂತಹ ಹೊಟೇಲ್‍ಗಳು ಉದ್ಯಮ ಪ್ರಾರಂಭಿಸಲು ಈಗ ಪರವಾನಗಿ ನವೀಕರಣವನ್ನು ಕಡ್ಡಾಯವಾಗಿ ಮಾಡಬೇಕು. ಅದರಲ್ಲೂ ಸಂಪೂರ್ಣ ಶುಲ್ಕವನ್ನು ಕಟ್ಟಬೇಕೆಂದು ಸರ್ಕಾರ ಆದೇಶ ಮಾಡಿದೆ.

ಸಿಎಲ್-6, ಸಿಎಲ್-6ಎ ಸನ್ನದ್ದುದಾರರು 12 ತಿಂಗಳ ಸಂಪೂರ್ಣ ಪರವಾನಗಿ ಶುಲ್ಕವನ್ನು ಕಟ್ಟಬೇಕಾಗಿದೆ. ಇಲ್ಲದಿದ್ದರೆ ತಮ್ಮ ಹೊಟೇಲ್ ಉದ್ಯಮಗಳನ್ನು ಪ್ರಾರಂಭಿಸುವಂತಿಲ್ಲ. ಪರವಾನಗಿ ಪಡೆಯದಿದ್ದರೆ ಕೆಎಸ್‍ಬಿಎಲ್‍ನಿಂದ ಮದ್ಯವನ್ನು ಖರೀದಿಸುವಂತಿಲ್ಲ.  ಕೋವಿಡ್-19 ನಿಮಿತ್ತ ಹಲವು ಹೊಟೇಲ್‍ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಆಸ್ಪತ್ರೆಯವರಿಗೆ ಹೊಟೇಲ್ ಕೊಠಡಿಗಳನ್ನು ಉಪಯೋಗಿಸಲು ನೀಡಲಾಗಿತ್ತು. ಹಾಗಾಗಿ ಯಾವುದೇ ಅಬಕಾರಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ.

2020-21ನೆ ಸಾಲಿಗೆ ಬಾಕಿ ಇರುವ ಸನ್ನದ್ದುಶುಲ್ಕ ಪಾವತಿಸಲು ವಿನಾಯಿತಿ ನೀಡಬೇಕೆಂದು ಹಲವು ಹೊಟೇಲ್‍ಗಳವರು ಮನವಿ ಮಾಡಿದರೂ ಸರ್ಕಾರ ಇದಕ್ಕೆ ಕ್ಯಾರೆ ಎಂದಿಲ್ಲ. ಲಾಕ್‍ಡೌನ್ ಸಂದರ್ಭದಲ್ಲಿ ಹೊಟೇಲ್ ಸ್ಥಗಿತಗೊಳಿಸಿದ ಅವಧಿ, ಕ್ವಾರಂಟೈನ್ ಕೇಂದ್ರವಾಗಿ ಮಾರ್ಪಾಡಾದ ಅವಧಿ ಸೇರಿದಂತೆ ಎಲ್ಲ 12 ತಿಂಗಳು ಪರವಾನಗಿ ಶುಲ್ಕ ಪಾವತಿಸಿ ಉದ್ಯಮವನ್ನು ಪ್ರಾರಂಬ ಮಾಡಬೇಕು. ಇಲ್ಲದಿದ್ದರೆ ಹೊಟೇಲ್ ತೆರೆಯಲು ಅವಕಾಶವೇ ಇಲ್ಲ ಎಂದು ಸರ್ಕಾರ ಹೇಳಿದೆ.

ಈಗಾಗಲೇ ಕೆಲವರು ಆರು ತಿಂಗಳ ಪರವಾನಗಿ ಶುಲ್ಕ ಕಟ್ಟಿದ್ದಾರೆ. ಕೆಲವರು ವ್ಯಾಪಾರ-ವಹಿವಾಟು ಇಲ್ಲದೆ ಲೈಸೆನ್ಸ್ ಶುಲ್ಕ ಕಟ್ಟಲೂ ಆಗದೆ ಪರದಾಡುತ್ತಿದ್ದಾರೆ. ಹೊಟೇಲ್‍ಗಳನ್ನು ಕೋವಿಡ್ ಸೆಂಟರ್‍ಗಳಿಗೆ ನೀಡಿದವರಿಗೆ ವಿನಾಯಿತಿ ನೀಡಬೇಕೆಂದು ಹಲವರು ಸರ್ಕಾರಕ್ಕೆ ಮನವಿ ಕೂಡ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಸಾವಿರಾರು ಇಂತಹ ಹೊಟೇಲ್‍ಗಳಿವೆ. 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಇವರನ್ನು ನಂಬಿ ಒಂದು ಲಕ್ಷ ಕುಟುಂಬಗಳಿವೆ. ಕೆಲವರು ಸಾಲ ಮಾಡಿ ಹೊಟೇಲ್ ಪ್ರಾರಂಭಿಸಿದವರು ಸಾಲ ಕಟ್ಟಲಾಗದೆ ಪರದಾಡುತ್ತಿದ್ದಾರೆ. ಇಂತಹವರು ಕನಿಷ್ಟ ಲೈಸೆನ್ಸ್ ಶುಲ್ಕದಲ್ಲಾದರೂ ವಿನಾಯಿತಿ ನೀಡಿ ಎಂದು ಮನವಿ ಮಾಡುತ್ತಿದ್ದಾರೆ.

ಸರ್ಕಾರದ ಈ ಹೊರೆಯ ಜತೆ ಬಿಬಿಎಂಪಿ, ಬಿಡಬ್ಲ್ಯೂಎಸ್‍ಎಸ್‍ಬಿ, ಬೆಸ್ಕಾಂ, ಇನ್ನಿತರ ತೆರಿಗೆ ಹೊರೆಗಳು ಕೂಡ ಹೆಚ್ಚಾಗಿವೆ. ಈ ಎಲ್ಲ ಶುಲ್ಕದ ಬರೆಗಳ ಜತೆ ಉದ್ದಿಮೆಗಳನ್ನು ನಡೆಸಬೇಕೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್‍ನ ವ್ಯವಹಾರ ನಡೆದಿಲ್ಲ. ಸಿಎಲ್-6ಎನಲ್ಲೂ ಕೂಡ ಅಬಕಾರಿ ವ್ಯವಹಾರಗಳು ನಡೆದಿಲ್ಲವಾದರೂ ಸರ್ಕಾರ ಪರವಾನಗಿ ಶುಲ್ಕ ಕಟ್ಟಲು ಹೇಳಿದೆ.

ತಿಂಗಳಿಗೆ 75 ಸಾವಿರದಿಂದ ಒಂದು ಲಕ್ಷದವರೆಗೆ ಪರವಾನಗಿ ಶುಲ್ಕ ಕಟ್ಟಬೇಕು. ಲಾಕ್‍ಡೌನ್ ಅವಧಿಯಲ್ಲಿ ವಿನಾಯಿತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ, ನಮ್ಮ ಮನವಿಯನ್ನು ಈವರೆಗೆ ಪುರಸ್ಕರಿಸಿಲ್ಲ. ಈಗ ಬಂದಿರುವ ಹೊಸ ಸಚಿವರ ಮುಂದೆ ನಮ್ಮ ಮನವಿ ಸಲ್ಲಿಸುತ್ತೇವೆ ಎಂದು ಹೊಟೇಲ್‍ಗಳ ಸಂಘದ ಅಧ್ಯಕ್ಷ ಬಿ.ಸಿ.ರಾವ್ ಹೇಳಿದ್ದಾರೆ.

* ಕೊರೊನಾ ಕಾರಣ ಸುಮಾರು 10 ತಿಂಗಳ ಕಾಲ ಮುಚ್ಚಲ್ಪಟ್ಟಿದ್ದ ಬಾರ್ ಅಂಡ್ ರೆಸ್ಟೋರೆಂಟ್‍ಗಳು.
* ಸಿಎಲ್-6, ಸಿಎಲ್-6ಎ, ಹೊಟೇಲ್, ಬಾರ್‍ಗಳು ಸನ್ನದ್ದು ಪಡೆಯಲು ಪರದಾಟ.
* 10 ತಿಂಗಳ ಕಾಲ ಯಾವುದೇ ವಹಿವಾಟಿಲ್ಲ. ಪರವಾನಗಿ ಪಡೆಯದೆ ಕೆಎಸ್‍ಬಿಎಲ್‍ನಿಂದ ಮದ್ಯ ಪಡೆಯುವಂತೆಯೂ ಇಲ್ಲ.
* ಕೋವಿಡ್-19 ಹಿನ್ನೆಲೆಯಲ್ಲಿ ಹೊಟೇಲ್‍ಗಳನ್ನು ಮುಚ್ಚುವಂತೆ ಸರ್ಕಾರವೇ ಆದೇಶ ನೀಡಿ ಈಗ 12 ತಿಂಗಳ ಕಾಲ ಸಂಪೂರ್ಣ ಪರವಾನಗಿ ಶುಲ್ಕ ನೀಡುವಂತೆ ಒತ್ತಾಯ ಮಾಡುತ್ತಿರುವುದು ಯಾವ ನ್ಯಾಯ ಎಂಬುದು ಹೊಟೇಲ್ ಉದ್ಯಮಿಗಳ ಪ್ರಶ್ನೆ.
* 1600ಕ್ಕೂ ಹೆಚ್ಚು ಹೊಟೇಲ್‍ಗಳು, 25 ಸಾವಿರಕ್ಕೂ ಹೆಚ್ಚು ನೌಕರರು, ಲಕ್ಷಕ್ಕೂ ಹೆಚ್ಚು ಅವಲಂಬಿತರು ಸಂಕಷ್ಟದಲ್ಲಿ.
* ಯಾವುದೇ ವಹಿವಾಟು ನಡೆಯದಿದ್ದರೂ ಪ್ರತಿ ತಿಂಗಳು 75 ಸಾವಿರದಿಂದ 1 ಲಕ್ಷದವರೆಗೆ ಪರವಾನಗಿ ಶುಲ್ಕ ಕಟ್ಟಬೇಕೆಂಬ ಸರ್ಕಾರದ ಫರ್ಮಾನು.
* ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ನಿಲ್ಲಬೇಕಾದ ಸರ್ಕಾರ ವಸೂಲಿಗಿಳಿದಿರುವುದರ ವಿರುದ್ಧ ಆಕ್ರೋಶಗೊಂಡಿರುವ ಉದ್ಯಮಿಗಳು.

Facebook Comments