ನಾಳೆಯಿಂದ ಹೋಟೆಲ್-ರೆಸಾರ್ಟ್ ಓಪನ್, ವ್ಯಾಪಾರ-ವಹಿವಾಟು ಸಹಜ ಸ್ಥಿತಿಯತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.7- ಒಂದೆಡೆ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ,ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾ.23ರಿಂದ ಬಂದ್ ಆಗಿರುವ ಶಾಪಿಂಗ್ ಮಾಲï, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳು ನಾಳೆಯಿಂದ ಪುನರಾರಂಭಗೊಳ್ಳುತ್ತಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳು ಆರಂಭವಾಗಲಿವೆ.

ಇದರಿಂದ ಕರ್ನಾಟಕ ಮತ್ತೆ ಸಹಜ ಸ್ಥಿತಿಯತ್ತ ಮರಳಲಿದ್ದು, ವ್ಯಾಪಾರ ವಹಿವಾಟು ಇಲ್ಲದೆ ಕೆಂಗೆಟ್ಟಿದ್ದ ಹೊಟೇಲ್ ಮಾಲೀಕರು, ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ದಿಮೆದಾರರು ಸೇರಿದಂತೆ ಮತ್ತಿತರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಆದರೆ, ಇಲ್ಲಿಯೂ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸರ್ಕಾರ ಸೂಚನೆ ಕೊಟ್ಟಿರುವ ಕಾರಣ, ಸಾರ್ವಜನಿಕರ ಸ್ಪಂದನೆ ಮೇಲೆ ಎಲ್ಲವೂ ಅವಲಂಬಿಸಿದೆ. ಈ ನಡುವೆ ರಾಜ್ಯ ಸರ್ಕಾರ 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ಎಲ್ಲಿಯೂ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟ ಸೂಚನೆ ಕೊಟ್ಟಿದೆ. ಹೊಟೇಲ್ , ಸೇರಿದಂತೆ ಹೊರಗಡೆ ಆಗಮಿಸುವ ಜನರಿಗಾಗಿ ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.

ಎಲ್ಲಾ ಕಡೆ ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದೆ. ಸ್ಯಾನಿಟೈಸರ್ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಆಗಮಿಸಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ.

ಈ ನಡುವೆ ಲಾಕ್‍ಡೌನ್ ನಿಂದ ತಾತ್ಕಾಲಿಕವಾಗಿ ಬಂದ್ ಆಗಿದ್ದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನರಾರಂಭಿಸಲು ಎದುರಾದ ಕೆಲವು ತೊಡಗುಗಳ ನಿವಾರಣೆಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭೆ ನಡೆಸಿ, ಹೋಟೆಲï, ರೆಸ್ಟೋರೆಂಟ, ರೆಸಾರ್ಟ್, ಜಂಗಲ್ ಲಾಡ್ಜ್ ಸೇರಿದಂತೆ ಎಲ್ಲಾ ಆತಿಥ್ಯ ಕೇಂದ್ರಗಳನ್ನು ಅವಕಾಶ ಕಲ್ಪಿಸಿ, ಎಲ್ಲಾಡೆ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೊರೋನಾ ಹಾಟ್‍ಸ್ಪಾರ್ಟ್ ಎನಿಸಿಕೊಂಡಿರುವ ರಾಜ್ಯಗಳ ಮೂಲದ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿಲ್ಲ. ಮಹಾರಾಷ್ಟ್ರ, ತಮಿಳುನಾಡು, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಸೋಂಕು ಪ್ರಕರಣ ಹೆಚ್ಚಾಗಿ ಕಂಡು ಬಂದಿದ್ದು, ಈ ರಾಜ್ಯಗಳನ್ನು ಕೊರೋನಾ ಹಾಟ್‍ಸ್ಪಾರ್ಟ್ ರಾಜ್ಯಗಳೆಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ 50,000ಕ್ಕೂ ದರ್ಶಿನಿಗಳು ಸೇರಿದಂತೆ ಹೋಟೆಲ್ ಹಾಗೂ ರೆಸ್ಟೋರೆಂಟ್‍ಗಳಿದ್ದು, ಬೆಂಗಳೂರು ನಗರವೊಂದಲ್ಲಿಯೇ 15,000 ಹೋಟೆಲ್ ಗಳಿವೆ. ಈ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಕೊರೋನಾ ಹಾಟ್‍ಸ್ಪಾರ್ಟ್‍ರಾಜ್ಯಗಳಿಂದ ಬಂದ ಸಿಬ್ಬಂದಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತಿಲ್ಲ.

Facebook Comments