ಮನೆಗೆ ಬೆಂಕಿ ಬಿದ್ದು ಮೂವರು ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ಜ.2- ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಸಜೀವ ದಹನವಾಗಿರುವ ಘಟನೆ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ನಗರದ ಗಾರೆಹಟ್ಟಿ ನಿವಾಸಿಯಾದ ಅರುಣ್ (40), ಪತ್ನಿ ಲತಾ (35) ಮತ್ತು ಪುತ್ರಿ ಅಮೃತಾ (13) ಮೃತಪಟ್ಟ ನತದೃಷ್ಟರು.

ಅರುಣ್ ಖಾಸಗಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಪತ್ನಿ ಲತಾ ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ನರ್ಸ್ ಆಗಿದ್ದರು. ರಾತ್ರಿ ಎಂದಿನಂತೆ ಎಲ್ಲರೂ ಊಟ ಮಾಡಿ ಮಲಗಿದ್ದಾರೆ. ಬೆಳಗಾಗುವಷ್ಟರಲ್ಲಿ ಈ ಮೂವರು ಬೆಂಕಿ ಅವಘಡದಿಂದ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ.

ಮುಂಜಾನೆ ಇವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ತಕ್ಷಣ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಾಗಿಲು ಒಡೆದು ನೋಡಿದಾಗ ಮೂವರು ಸ್ಥಳದಲ್ಲೇ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ. ಒಂದು ಮೂಲದ ಪ್ರಕಾರ, ಇವರೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.  ಒಟ್ಟಾರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡು ವರದಿ ಬಂದ ನಂತರವಷ್ಟೆ ಸಾವು ಹೇಗಾಯಿತು ಎಂಬ ಬಗ್ಗೆ ನಿಖರ ಕಾರಣ ತಿಳಿದುಬರಲಿದೆ.

Facebook Comments