ಬಾಡಿಗೆ ಕೊಡದ ಟ್ಯಾಕ್ಸಿ ಚಾಲಕನ ಮೇಲೆ ಗುಂಡು ಹಾರಿಸಿ ಪರಾರಿಯಾದ ಮನೆ ಮಾಲೀಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.25- ಮನೆ ಬಾಡಿಗೆ ವಿಚಾರವಾಗಿ ಟ್ಯಾಕ್ಸಿ ಚಾಲಕನ ಜತೆ ಜಗಳವಾಡಿದ ಮನೆ ಮಾಲೀಕ, ಆತನ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಟ್ಯಾಕ್ಸಿ ಚಾಲಕ ಸೆಲ್ವಂ ಭುಜಕ್ಕೆ ಒಂದು ಗುಂಡು ತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಇವರು ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಕ್ಷ್ಮಿ ಲೇಔಟ್ ನಿವಾಸಿ ಆನಂದರೆಡ್ಡಿ ಅವರು ಜಮೀನ್ದಾರರಾಗಿದ್ದು, ಹಲವು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದಾರೆ.

ಇವರ ಒಂದು ಮನೆಯನ್ನು ಟ್ಯಾಕ್ಸಿ ಚಾಲಕ ಸೆಲ್ವಂ ಬಾಡಿಗೆಗೆ ಪಡೆದಿದ್ದರು. ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸೆಲ್ವಂ ಮನೆಗೆ ಬೀಗ ಹಾಕಿ ಹೋಗಿದ್ದರು. ಬಾಡಿಗೆ ಕೊಟ್ಟಿರಲಿಲ್ಲ. ಇದೀಗ ಸೆಲ್ವಂ ಮರಳಿ ಬಂದಿದ್ದು, ಈ ಮನೆಯನ್ನು ಬಾಡಿಗೆಗೆ ಕೊಡಲ್ಲ, ಲೀಸ್‍ಗೆ ಕೊಡುತ್ತೇನೆ ಎಂದು ಮಾಲೀಕ ಆನಂದರೆಡ್ಡಿ ತಿಳಿಸಿದ್ದಾರೆ.

ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಮನೆ ಬಾಡಿಗೆ ವಿಚಾರದಲ್ಲಿ ಆನಂದರೆಡ್ಡಿ ಹಾಗೂ ಸೆಲ್ವಂಗೂ ಜಗಳವಾಗಿದೆ. ತಾಳ್ಮೆ ಕಳೆದುಕೊಂಡ ಆನಂದರೆಡ್ಡಿ ಅವರು ಪಿಸ್ತೂಲಿನಿಂದ ಸೆಲ್ವಂ ಮೇಲೆ ಗುಂಡು ಹಾರಿಸಿದಾಗ ಒಂದು ಗುಂಡು ಸೆಲ್ವಂ ಭುಜಕ್ಕೆ ತಾಗಿದೆ. ಈ ವೇಳೆ ಆನಂದರೆಡ್ಡಿ ಪರಾರಿಯಾಗಿದ್ದಾರೆ.

ಗುಂಡೇಟಿನಿಂದ ಗಾಯಗೊಂಡ ಸೆಲ್ವಂ ಅವರನ್ನು ತಕ್ಷಣ ಸೆಂಟ್‍ಜಾನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಬೇಗೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆನಂದರೆಡ್ಡಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin