ಮನೆ ಬಾಗಿಲು ಒಡೆದು ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

ಕನಕಪುರ, ಫೆ.13- ಕಳ್ಳರ ಗುಂಪು ಗ್ರಾಮಕ್ಕೆ ನುಗ್ಗಿ ಮನೆ ಬಾಗಿಲುಗಳನ್ನು ಒಡೆದು ಕೈಗೆ ಸಿಕ್ಕ ವಸ್ತುಗಳನ್ನು ದೋಚಿರುವ ಘಟನೆ ಕಳೆದ ರಾತ್ರಿ ತಾಲ್ಲೂಕಿನ ಹೊರವಲಯದ ಗಂಗಯ್ಯನದೊಡ್ಡಿ, ಹೊಸದೊಡ್ಡಿ ಗ್ರಾಮಗಳಲ್ಲಿ ನಡೆದಿದೆ. ಸುಮಾರು ನಾಲ್ಕರಿಂದ ಐದು ಜನರ ಗುಂಪೊಂದು ಮೊದಲಿಗೆ ಹೊಸಗದ್ದೆಯಲ್ಲಿರುವ ಬಸವಣ್ಣ ದೇಗುಲದ ಬಾಗಿಲು ಒಡೆದು ಒಳನುಗ್ಗಿ ಹುಂಡಿ ಮತ್ತು ಬೆಲೆಬಾಳುವ ವಸ್ತುಗಳನ್ನು ಹುಡುಕಾಡಿ ಏನೂ ಸಿಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ನಂತರ ಗಂಗಯ್ಯನದೊಡ್ಡಿಯಲ್ಲಿ ಕೆಂಚಯ್ಯ ಎಂಬುವವರ ಮನೆಯ ಹಿಂಬಾಗಿಲು ಒಡೆದು ಅಲ್ಲಿ ನಿಲ್ಲಿಸಿದ್ದ ಟಿವಿಎಸ್ ಮೊಪೆಡ್ ದೋಚಿದ್ದಾರೆ. ಆನಂತರ ವೆಂಕಟೇಶ್ ಎಂಬುವವರ ಮನೆಗೆ ನುಗ್ಗಿ ಕೋಣೆಯಲ್ಲಿದ್ದ ಬೀರುವನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಂತರ ವಠಾರದಲ್ಲಿ ಮಲಗಿದ್ದ ವೃದ್ದೆಯ ಕೊರಳಲ್ಲಿದ್ದ ಕಾಸಿನ ಸರ ಕಿತ್ತುಕೊಳ್ಳಲು ಮುಂದಾದಾಗ ಆಕೆ ಕಿರುಚಿಕೊಂಡಿದ್ದಾರೆ. ಈ ವೇಳೆ ಮನೆಯವರೆಲ್ಲ ಎದ್ದಾಗ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.

ಇದೇ ರೀತಿ ಗಂಗಯ್ಯನದೊಡ್ಡಿ ಗ್ರಾಮದಲ್ಲೂ ಮನೆಯೊಂದಕ್ಕೆ ನುಗ್ಗಿ ಹಿತ್ತಾಳೆ ಪಾತ್ರೆಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಅನಂತರಾಮ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕಳ್ಳರ ಚಲವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಕಳೆದ ರಾತ್ರಿ ನಡೆದ ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Facebook Comments