ಕೊರೊನಾ ಸೋಂಕಿತರ ಮನೆಗಳನ್ನು ಸೀಲ್‍ಡೌನ್ ಮಾಡುವ ಪದ್ಧತಿ ಕೈಬಿಡಲು ಮುಂದಾದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.10- ಕೊರೊನಾ ಸೋಂಕಿತರ ಮನೆಗಳನ್ನು ಸೀಲ್‍ಡೌನ್ ಮಾಡುವ ಪದ್ಧತಿಯನ್ನು ಕೈ ಬಿಡುವ ಬಗ್ಗೆ ಬಿಬಿಎಂಪಿ ಚಿಂತನೆ ನಡೆಸಿದೆ.ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು , ಸೋಂಕಿತರ ಕುಟುಂಬಸ್ಥರು ಮನೆಯಿಂದ ಹೊರ ಬರುತ್ತಿಲ್ಲ. ಹಾಗೂ ಜನರಲ್ಲಿ ಜಾಗೃತಿ ಇರುವಾಗ ಸೀಲ್‍ಡೌನ್ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಹಾಗಾಗಿ ಸೀಲ್‍ಡೌನ್ ಮಾಡುವ ಪದ್ಧತಿಯನ್ನು ಕೈ ಬಿಡಲು ಬಿಬಿಎಂಪಿ ಮುಂದಾಗಿದೆ. ಸೋಂಕಿತರ ಮನೆ ಸೀಲ್‍ಡೌನ್ ಮಾಡುವ ಬದಲು ಪರ್ಯಾಯ ವ್ಯವಸ್ಥೆ ಮಾಡುವ ಬಗ್ಗೆಯೂ ಕೂಡ ಚಿಂತನೆ ಮಾಡಲಾಗಿದೆ.

ಸೋಂಕಿತರ ಮನೆಗಳನ್ನು ಸೀಲ್‍ಡೌನ್ ಮಾಡುವುದರಿಂದ ಸೋಂಕಿತರ ಕುಟುಂಬಸ್ಥರಿಗೆ ತೀವ್ರ ಮುಜುಗರವಾಗುತ್ತದೆ. ಹೀಗಾಗಿ ಸೀಲ್‍ಡೌನ್ ಕೈ ಬಿಡುವ ಬಗ್ಗೆ ಚಿಂತನೆ ಮಾಡಲಾಗಿದೆ. ಅಲ್ಲದೆ ಸೀಲ್‍ಡೌನ್‍ಗಾಗಿ ಸಾಕಷ್ಟು ದುಂದು ವೆಚ್ಚ ಕೂಡ ಆಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಸಂಬಂಧ ಹಲವಾರು ದೂರುಗಳು ಬಂದಿವೆ. ಮನೆಗಳನ್ನು ಸೀಲ್‍ಡೌನ್ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ.

ಮನೆಗಳನ್ನು ಸೀಲ್ ಡೌನ್ ಮಾಡುವುದು ಅಥವಾ ತಗಡು ಹಾಕುವುದು ನಮಗೂ ಕೂಡ ಮುಜುಗರ ತಂದಿದೆ. ಹಾಗಾಗಿ ಬೇಡ ಎಂದು ಜನ ಮನವಿ ಮಾಡಿದ್ದಾರೆ.

ಈ ಮನವಿಯನ್ನು ರಾಜ್ಯ ಸರ್ಕಾರದ ಮುಂದೆ ಇಡುತ್ತೇವೆ. ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೋ ಕಾದು ನೋಡಬೇಕಿದೆ. ಈ ವರೆಗೆ ಸೀಲ್‍ಡೌನ್ ಪದ್ಧತಿ ಕೈ ಬಿಡುವ ಬಗ್ಗೆ ಇನ್ನು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.

Facebook Comments

Sri Raghav

Admin