ಅಯೋಧ್ಯೆಯಲ್ಲಿ ಭದ್ರತಾ ವ್ಯವಸ್ಥೆ ಹೇಗಿದೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಆಯೋಧ್ಯೆ, ಆ.4- ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ನಾಳೆ ನಡೆಯಲಿರುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗಾಗಿ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ. ಆಯೋಧ್ಯೆ ಸುತ್ತ ಏಳು ಸುತ್ತಿನ ಕೋಟೆಯಂಥ ಬಿಗಿ ಭದ್ರತಾ ಏರ್ಪಾಡುಗಳನ್ನು ಕೈಗೊಳ್ಳಲಾಗಿದೆ.

ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ದಾಳಿ ನಡೆಸಲು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಉತ್ತರಪ್ರದೇಶ ರಾಜ್ಯಾದ್ಯಂತ ಹಿಂದೆಂದೂ ಕಂಡು ಕೇಳರಿಯದಂಥ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜಮು-ಕಾಶ್ಮೀರಕ್ಕೆ ಭಾರತೀಯ ಸಂವಿಧಾನದ 270ನೆ ವಿಧಿ ಅನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ ನಾಳೆಗೆ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಪ್ರತ್ಯೇಕತಾ ಬಣಗಳು ಮತ್ತು ಉಗ್ರರು ಹಿಂಸಾಚಾರ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿಯೂ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸುಮಾರು 180 ಗಣ್ಯಾತಿಗಣ್ಯರು ರಾಮಮಂದಿರ ನಿರ್ಮಾಣ ಭೂಮಿ ಪೂಜೆಯಲ್ಲಿ ಭಾಗವಹಿಸುತ್ತಿರುವುದರಿಂದ ಅಭೂತಪೂರ್ವ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಭಯೋತ್ಪಾದನೆ ನಿಗ್ರಹ ದಳ, ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ವಿವಿಧ ಭದ್ರತಾಪಡೆಗಳ ವಿಶೇಷ ಕಮ್ಯಾಂಡೋಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಸೂಕ್ಷ್ಮ ಸ್ಥಳಗಳಲ್ಲಿ ಶಾರ್ಪ್‍ಶೂಟರ್‍ಗಳನ್ನು ನಿಯೋಜಿಸಲಾಗಿತ್ತು. ಆಯೋಧ್ಯೆ ಸುತ್ತಮುತ್ತ ಇಂದಿನಿಂದಿನೇ ಡ್ರೋಣ್‍ಗಳ ಕಣ್ಗಾವಲು ಹಾಕಲಾಗಿದೆ. ಬಾಂಬ್ ಪತ್ತೆ ದಳಗಳು, ಸ್ಫೋಟಕ ನಿಷ್ಕ್ರಿಯ ತಜ್ಞರು ಮತ್ತು ಶ್ವಾನಪಡೆಗಳನ್ನೂ ಸಹ ಸೇವೆಗೆ ಒಳಸಿಕೊಳ್ಳಲಾಗಿದೆ.

ಆಯೋಧ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಹಾಕಲಾಗಿದೆ. ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಮಫ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Facebook Comments

Sri Raghav

Admin