ಯಾರು ಎಷ್ಟೇ ವಿರೋಧ ಮಾಡಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿಯೇ ಸಿದ್ಧ: ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ ,ಜ.18 ಯಾರು ಎಷ್ಟೇ ವಿರೋಧ ಮಾಡಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿಯೇ ಸಿದ್ಧ ಎಂದಿರುವ ಬಿಜೆಪಿರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸರ್ಕಾರದ ಉದ್ದೇಶಿತ  ಕಾಯ್ದೆಯೂ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವವನ್ನು ನೀಡಲಿದ್ದು, ಯಾರೊಬ್ಬರೂ ಈ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ದೇಶದ ಜನತೆಗೆ ಅಭಯ ನೀಡಿದರು.

ಇಲ್ಲಿನ ನೆಹರು ಮೈದಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಿಎಎ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,ರಾಹುಲ್ ಬಾಬಾ(ರಾಹುಲ್ ಗಾಂಧಿ)ಕಿರುಚುತ್ತಿರಲಿ ನಾವು ಸಿಎಎ ಜಾರಿಗೆ ತರುತ್ತೇವೆ ಎಂದು ವ್ಯಂಗ್ಯವಾಡಿದರು.ಧಾರವಾಡಕ್ಕೆ ಬಂದಿರುವುದು ಸಂತೋಷವಾಗಿದೆ.  ಕಿತ್ತೂರು ಚೆನ್ನಮ್ಮ ಇದೇ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟಿದ್ದಳು. ಇದೇ ಭೂಮಿಯಲ್ಲಿ ಸಂಗೊಳ್ಳಿ ರಾಯಣ್ಣ ಸಹ ಪ್ರಾಣ ತ್ಯಾಗ ಮಾಡಿದರು. ಜೊತೆಗೆ ಗಂಗೂಬಾಯಿ ಹಾನಗಲ್ಲ, ದ.ರಾ.ಬೇಂದ್ರ ಸಹ ಇದೇ ಭೂಮಿಯಿಂದ ಬಂದಿದ್ದಾರೆ. ಮೂರು ಸಾವಿರ ಮಠ ಮತ್ತು ಹಲವು ಸ್ವಾಮೀಜಿಗಳು, ಸಿದ್ಧಾರೂಢರು ಈ ನೆಲದ ಮೌಲ್ಯ ಹೆಚ್ಚಿಸಿದ್ದಾರೆ ಎಂದು ಹೊಗಳಿದರು.

ಸಿಎಎ ವಿರೋಧಿಸುವವರು ದಲಿತ ವಿರೋಧಿಗಳು ಎಂದ ಅಮಿತ್ ಶಾ, ಮಾನವ ಹಕ್ಕು ಸಂಘಟನೆಗಳವರಿಗೂ ಟಾಂಗ್ ನೀಡಿದ ಶಾ, ಪಾಕಿಸ್ತಾನದಲ್ಲಿ ಹೋಗಿ ಅಲ್ಲಿನ ಇತರೆ ಧರ್ಮಿಯರನ್ನು ನೋಡಿ, ಅವರ ಹಕ್ಕಿನ ಬಗ್ಗೆಯೂ ಆಲೋಚಿಸಿ ಎಂದರು. ಕಾಯ್ದೆ ಅನುಷ್ಠಾನವಾಗುವುದರಿಂದ ಅಲ್ಪಸಂಖ್ಯಾತ ಸಮೂದಾಯದರ ಪೌರತ್ವಕ್ಕೆ ಕಿಂಚಿತ್ತೂ ಧಕ್ಕೆ ಬರುವುದಿಲ್ಲ ಎಂದು ಪುನರುಚ್ಚ ಮಾಡಿದರು.

ಕಾಂಗ್ರೆಸ್’ಗೆ ವೋಟ್’ಬ್ಯಾಂಕ್ ರಾಜಕಾರಣ ಅನಿವಾರ್ಯವಾಗಿದ್ದು, ಇದೇ ಕಾರಣಕ್ಕೆ ಅದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದೆ. ಇವರು ನಿಜವಾದ ಗಾಂಧಿ ಭಕ್ತರಾಗಿದ್ದರೆ, ಅವರ ಆಶಯದಂತೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಲಿ ಎಂದು ಶಾ ಸವಾಲು ಹಾಕಿದರು. ಸಿಎಎ ಎಂಬುದು ಅಲ್ಪಸಂಖ್ಯಾತರಿಗೆ ನಾಗರೀಕತ್ವ ನೀಡುವ ಕಾನೂನಾಗಿದೆ. ಮೂರು ದೇಶಗಳ ಅಲ್ಪಸಂಖ್ಯಾತರಿಗೆ ನಾಗರೀಕತ್ವ ನೀಡಲೇ ಬೇಕಿದೆ ಎಂದು ನುಡಿದರು.

ರಾಹುಲ್ ಗಾಂಧಿ ಕಿವಿ ತೆಗೆದುಕೊಂಡು ಕೇಳಿಸಿಕೊಳ್ಳಿ, ಈ ದೇಶವನ್ನು ಧರ್ಮದ ಆಧಾರದಲ್ಲಿ ಪ್ರತ್ಯೇಕಿಸಲಾಯಿತು. ಈ ಕಾರ್ಯವನ್ನು ಮಾಡಿದ್ದು ನಿಮ್ಮದೇ ಪಕ್ಷ. ನಿಮ್ಮ ಮುತ್ತಾತ ನೆಹರೂ ಅವರೇ ಇದರ ಕಾರಣಕಾರ್ತರು ಎಂದು ದೂರಿದರು. ಬಿಜೆಪಿ ವೋಟ್ ಬ್ಯಾಂಕ್ ನೀತಿಯ ಹಿಂದೆ ಬಿದ್ದಿಲ್ಲ. ಇಂತಹ ನೀತಿಯ ಹಿಂದೆ ಬಿದ್ದಿರುವ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಜೆಡಿಎಸ್ ಸೇರಿದಂತೆ ಅನೇಕ ವಿಕ್ಷಗಳು ಕೇಂದ್ರ ಸರ್ಕಾರ ಮಹತ್ವದ ಕಾರ್ಯಗಳನ್ನು ವಿರೋಧಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಅವರು 2ನೇ ಬಾರಿಗೆ ಪಿಎಂ ಆದ ಬಳಿಕ ಹಲವು ಬದಲಾವಣೆಗಳಾಗಿವೆ. 70 ವರ್ಷ ಮಾಡಲಾಗದ ಬದಲಾವಣೆ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಶೋಷಣೆ ಮಾಡಿದರು. ಶಿಕ್ಷಣ ಅವಕಾಶವನ್ನೇ ಕಿತ್ತುಕೊಂಡರು. ಹೀಗಾಗಿ ಮೂರು ದೇಶಗಳ ಅಲ್ಪಸಂಖ್ಯಾತರಿಗೆ ನಾಗರೀಕತ್ವ ಕೊಡಲೇಬೇಕಿದೆ ಎಂದು ಅಮಿತ್ ಶಾ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಅವರಿಗೆ ಬಲ ತುಂಬುವ ಮೂಲಕ ನವಭಾರತದ ನಿರ್ಮಾಣ ಕಾರ್ಯಕ್ಕೆ ಕೈಜೋಡಿಸುವಂತೆ ಅಮಿತ್ ಶಾ ಮನವಿ ಮಾಡಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ವಿರೋಧಿಸುತ್ತಿರುವ ಜನರಿಗೆ ಈ ದೇಶದ ಇತಿಹಾಸದ ಅರಿವಿಲ್ಲ ‌ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದು ಹರಿಹಾಯ್ದರು. ಧರ್ಮದ ಆಧಾರದ ಮೇಲೆ ಈ ದೇಶವನ್ನು ಒಡೆಯಲಾಗಿದ್ದು, ಇದಕ್ಕೆ ಕಾಂಗ್ರೆಸ್ ಪ್ರಮುಖ ಕಾರಣ ಎಂದು ಅಮಿತ್ ಶಾ ಈ ವೇಳೆ ಗಂಭೀರ ಆರೋಪ ಮಾಡಿದರು.

ಜೆಎನ್‌ಯು ನಲ್ಲಿ ದೇಶದ್ರೋಹಿ ಘೋಷಣೆ ಕೂಗಲಾಯಿತು. ‘ಆದರೆ ಅದು ಅವರ ವಾಕ್ ಸ್ವಾತಂತ್ರ್ಯ’ ಎಂದು ರಾಹುಲ್ ಗಾಂಧಿ ಹೇಳುತ್ತಾರೆ, ‘ನೀವು ಬೇಕಾದರೆ ನಮ್ಮ ಪಕ್ಷವನ್ನು ಬೈಯಿರಿ, ನಮ್ಮನ್ನು ಬೈಯಿರಿ, ಆದರೆ ದೇಶದ ವಿರುದ್ಧ ಮಾತನಾಡಿದರೆ ಅವರನ್ನು ಜೈಲಿಗೆ ಕಳಿಸುವುದೇ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಪಾಕ್‌ ಪ್ರಧಾನಿ ಇಮ್ರಾನ್ ಖಾನ್ ಸಹ ಸರ್ಜಿಕಲ್ ಸ್ಟ್ರೈಕ್‌ ಗೆ ಸಾಕ್ಷಿ ಕೇಳಿದರು, ರಾಹುಲ್ ಗಾಂಧಿ ಸಹ ಸರ್ಜಿಕಲ್ ಸ್ಟ್ರೈಕ್ ಗೆ ಸಾಕ್ಷಿ ಕೇಳಿದರು. ರಾಹುಲ್ ಗಾಂಧಿ-ಇಮ್ರಾನ್ ಖಾನ್ ನಡುವೆ ಸಂಬಂಧ ಏನೆಂಬುದು ಗೊತ್ತಾಗುತ್ತಿಲ್ಲ. ರಾ

ಹುಲ್ ಹೇಳಿಕೆಯನ್ನು ಭಾರತದ ವಿರೋಧವಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಬಳಸುತ್ತಿದೆ. ಈ ಕಾಂಗ್ರೆಸ್‌ ನವರು ಅವಮಾನದಿಂದ ನೀರಲ್ಲಿ ಮುಳುಗಿ ಸಾಯಬೇಕು ಎಂದು ಗುಡುಗಿದರು. ಆದರೆ ಮೋದಿ ಸರ್ಜಿಕಲ್ ಸ್ಟ್ರೈಕ್, ಏರ್‌ ಸ್ಟ್ರೈಕ್ ಮಾಡಿದಾಗ ಈ ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಅವರುಗಳು ಸಾಕ್ಷಿ ಕೇಳುತ್ತಾರೆ. ಪಾಕಿಸ್ತಾನದಿಂದ ಬಂದವರು ನಮ್ಮ ಸೈನಿಕರ ತಲೆ ಕಡೆದುಕೊಂಡು ಹೋಗುತ್ತಿದ್ದರು ಆದರೆ ಮೌನಿ ಮನಮೋಹನ್ ಸಿಂಗ್ ಮಾತನಾಡುತ್ತಲೇ ಇರಲಿಲ್ಲ. ಆದರೆ ಮೋದಿ ಸರ್ಕಾರದಲ್ಲಿ ಪರಿಸ್ಥಿತಿ ಬದಲಾಯಿತು. ಉರಿ ಮೇಲೆ ದಾಳಿ ಆಯಿತು, ಆದರೆ ಹತ್ತೇ ದಿನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದರು ಎಂದು ಸೈನಿಕರನ್ನು ಕೊಂಡಾಡಿದರು.

ಇಡೀಯ ಸಿಎಎ ವರದಿ ಓದಿ ಅದರಲ್ಲಿ ಒಬ್ಬರ ನಾಗರೀಕತೆಯನ್ನು ಸರ್ಕಾರ ಕಿತ್ತುಕೊಳ್ಳುತ್ತದೆ ಎಂಬ ಒಂದು ಅಂಶ ಇದ್ದರೂ ಸಹ ನಮ್ಮ ಸಚಿವ ಪ್ರಹ್ಲಾದ್ ಜೋಶಿ ನಿಮ್ಮ ಜೊತೆಗೆ ಬೇಕಾದರೆ ಚರ್ಚೆಗೆ ಇಳಿಯುತ್ತಾರೆ, ಸಮಯ, ಸ್ಥಳ ತಿಳಿಸಿ ಎಂದು ಅಮಿತ್ ಶಾ ಸವಾಲು ಹಾಕಿದರು. ಸೋನಿಯಾ ಗಾಂಧಿ, ಮನಮೋಹನ್‌ ಸರ್ಕಾರವಿದ್ದಾಗ ಪಾಕಿಸ್ತಾನದ ಭಯೋತ್ಪಾದಕರು ದೇಶದೊಳಗೆ ಬಂದು ನಮ್ಮ ಸೈನಿಕರನ್ನು ಹತ್ಯೆ ಮಾಡುತ್ತಿದ್ದರು.

ಆಗ ಮೌನಿ ಬಾಬಾ ಮನಮೋಹನ್‌ ಸಿಂಗ್ ಏನು ಮಾಡಲಿಲ್ಲ. ಅದೇ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪಾಕಿಸ್ತಾನದೊಳಗೆ ಹೋಗಿ ಅಲ್ಲಿನ ಭಯೋತ್ಪಾದಕನ್ನು ಹೊಡೆದುರಿಸಲು ಆದೇಶ ನೀಡುತ್ತಾರೆ. ಈಗ ಹೇಳಿ ಪ್ರಧಾನಿ ಒಳ್ಳೆದು ಮಾಡಿದ್ದಾರೊ ಇಲ್ಲವೊ? ಎಂದು ಪ್ರಶ್ನಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸಿಎಂ ಯಡಿಯೂರಪ್ಪ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರಿಗೆ ತೊಂದರೆಯಾಗಲಿದೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹರಿಹಾಯ್ದರು. ರಾಷ್ಟ್ರದ ಗೃಹಸಚಿವರಾಗಿ‌ ಅಮಿತ್​ ಷಾ ಅವರು ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ. ಇಂದು ಇಡೀ ದೇಶವೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಕಡೆ ನೋಡುತ್ತಿದೆ ಎಂದು ತಿಳಿಸಿದರು.

ಪ್ರತಿಪಕ್ಷಗಳು ಪೌರತ್ವ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಹೀಗಾಗಿ ಅಮಿತ್​ ಷಾ ನೇತೃತ್ವದಲ್ಲಿ ಜನಜಾಗೃತಿ ಮಾಡುತ್ತಿದ್ದೇವೆ ಎಂದರು. ಇನ್ನೂ ಕೇವಲ ಮೂರುವರೆ ವರ್ಷ ಮಾತ್ರ ಅಧಿಕಾರದಲ್ಲಿರುತ್ತೇವೆ. ಬಳಿಕ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಅಮಿತ್​ ಷಾ ಹಾಗೂ ಪ್ರಧಾನಿ ಮೋದಿ ಕೈ ಬಲ ಪಡಿಸಬೇಕಿದೆ. ಹುಬ್ಬಳ್ಳಿ ಹೋರಾಟದ ಭೂಮಿಯಾಗಿದೆ. ಎಲ್ಲ ಮೋರ್ಚಾ ಘಟಕಗಳು ಬಲವಾಗಬೇಕಿದೆ. ತನ್ಮೂಲಕ ಪಕ್ಷ ಬಲಗೊಳಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಇದೇ ವೇಳೆ ರಾಜ್ಯ ಬಜೆಟ್​ ವಿಚಾರವಾಗಿ ಮಾತನಾಡಿ ಮಾ.5ರಂದು ಬಜೆಟ್ ಮಂಡನೆಯಾಗಲಿದೆ. ರೈತಪರ ಹಾಗೂ ಜನಪರ ಬಜೆಟ್ ಮಂಡನೆ ಮಾಡುತ್ತೇವೆ. ರಾಜ್ಯವನ್ನ ಮಾದರಿ ರಾಜ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ.ಅಮಿತ್ ಶಾ ಅವರು ಪರಿಶ್ರಮ ಜೀವಿ. ಅವರ ಪರಿಶ್ರಮ ಎಲ್ಲರಿಗೂ ಸ್ಪೂರ್ತಿ ಎಂದು ಪ್ರಶಂಸಿದರು. ಬಿಜೆಪಿ ವಿಶ್ವದ ದೊಡ್ಡ ಪಕ್ಷ. ಇದಕ್ಕೆ ಅಮಿತ್ ಶಾ ಅವರೇ ಕಾರಣ. ಹಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅಮಿತ್ ಶಾ ಕಾರಣ. ಅಮಿತ್ ಶಾ ಅವರು ಪರಿಶ್ರಮ ಜೀವಿ. ಅವರ ಪರಿಶ್ರಮ ಎಲ್ಲರಿಗೂ ಸ್ಪೂರ್ತಿ. ತ್ರಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲು ಅಮಿತ್ ಶಾ ಕಾರಣ ಎಂದು ಕೊಂಡಾಡಿದರು.

ನಿಮ್ಮ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವುದಾದರೆ 88662 88862 ಮೊಬೈಲ್ ನಂಬರಿಗೆ ಮಿಸ್ ಕಾಲ್ ಕೊಡಿ ಎಂದು ಮನವಿ ಮಾಡಿಕೊಂಡರು. ಬಳಿಕ, ನೀವು ಸಿಎಎ ಹಾಗೂ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವುದಾದರೆ ಎರಡೂ ಕೈಗಳನ್ನು ಮೇಲೆತ್ತಿ ಎಂದು ಕೇಳಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಎಲ್ಲರೂ ಎರಡು ಕೈಗಳನ್ನು ಎತ್ತಿ ಬೆಂಬಲ ಸೂಚಿಸಿದರು.

ಇನ್ನು ಸಮಾವೇಶದಲ್ಲಿ ಇದೇ ವೇಳೆ ಮೊಬೈಲ್​ ನಂಬರ್​ಗೆ ಮಿಸ್​ ಕಾಲ್​ ನೀಡುವ ಮೂಲಕ 88662-88662 ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮೋದಿ ಪರ ನಿಲ್ಲಿ ಎಂದು ಶಾ ಕರೆ ನೀಡಿದರು. ಅಮಿತ್ ಶಾ ಅವರಿಗೆ ರಾಜ್ಯ ಬಿಜೆಪಿ ನಾಯಕರು ಸನ್ಮಾನ ನೆರವೇರಿಸಿದರು. ಸಮಾವೇಶದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ , ಸಚಿವ ಜಗದೀಶ್ ಶೆಟ್ಟರ್, ಶ್ರೀರಾಮುಲು ಸೇರಿ ಹಲವು ಮಂದಿ ಪಾಲ್ಗೊಂಡಿದ್ದರು.

Facebook Comments